ಆಸ್ಟ್ರೇಲಿಯಾದಲ್ಲಿ ಶುಕ್ರವಾರ ಮಧ್ಯರಾತ್ರಿ ಭಾರತೀಯನೊಬ್ಬನಿಗೆ ಬೆಂಕಿ ಹಚ್ಚಿದ ಘಟನೆ ಮನಕಲಕುವಂಥದ್ದು ಎಂದು ಭಾರತ ಬಣ್ಣಿಸಿದೆ. ಅಲ್ಲದೇ, ಇಂಥ ಘಟನೆಗಳು ಮರುಕಳಿಸದಂತೆ ಇದುವರೆಗೂ ಯಾವುದೇ ಕ್ರಮಗಳನ್ನು ಕೈಗೊಳ್ಳದಿರುವ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದೆ.
ಶನಿವಾರ ಸುದ್ದಿಗಾರರೊಂದಿಗೆ ಪ್ರಕರಣದ ಕುರಿತು ಮಾತನಾಡಿದ, ಕೇಂದ್ರ ಸಾಗರೋತ್ತರ ವ್ಯವಹಾರಗಳ ಸಚಿವ ವಯಲಾರ್ ರವಿ, ಆಸ್ಟ್ರೇಲಿಯಾದಲ್ಲಿ ಭಾರತೀಯರ ಮೇಲೆ ಈಗ ಮತ್ತೊಂದು ದಾಳಿ ಆಗಿರುವ ಕುರಿತು ವಿಷಾದ ವ್ಯಕ್ತಪಡಿಸಿದರು.
ಇಂಥ ಘಟನೆಗಳಿಗೆ ಸಂಬಂಧಿಸಿದಂತೆ ಕಾರಣರಾದವರನ್ನು ಆಸ್ಟ್ರೇಲಿಯಾ ಸರ್ಕಾರ ಶೀಘ್ರವೇ ಬಂಧಿಸಿ ಜೈಲಿಗೆ ತಳ್ಳಬೇಕು ಎಂದು ಆಗ್ರಹಿಸಿದರು. ಕಳೆದ ಮಧ್ಯರಾತ್ರಿ ಭಾರತೀಯ ಮೂಲದ 29ರ ಹರೆಯದ ಜಸ್ಪ್ರೀತ್ ಸಿಂಗ್ ಎಂಬಾತನಿಗೆ ಆಸ್ಟ್ರೇಲಿಯಾದ ಕಿಡಿಗೇಡಿಗಳು ಮೈಮೇಲೆ ಇಂಧನ ಸುರಿದು ಬೆಂಕಿ ಹಚ್ಚಿದ್ದರು.