ಮಾಧ್ಯಮಗಳು ಬೇಜವಾಬ್ದಾರಿಯಿಂದ ವರ್ತಿಸುತ್ತಿವೆ: ತರೂರ್ ಕಿಡಿ
ನವದೆಹಲಿ, ಭಾನುವಾರ, 10 ಜನವರಿ 2010( 15:42 IST )
PTI
'ವಿದೇಶಾಂಗ ನೀತಿ ಕುರಿತು ಜವಾಹರಲಾಲ್ ನೆಹರು ಮತ್ತು ಮಹಾತ್ಮಗಾಂಧಿ ಕುರಿತು ನಾನು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ಮಾಧ್ಯಮಗಳು ತಪ್ಪಾಗಿ, ಅಪ್ರಾಮಾಣಿಕವಾಗಿ ವರದಿ ಮಾಡಿರುವುದಾಗಿ' ವಿದೇಶಾಂಗ ಖಾತೆ ರಾಜ್ಯ ಸಚಿವ ಶಶಿ ತರೂರ್ ಭಾನುವಾರ ಹರಿಹಾಯ್ದಿದ್ದಾರೆ.
ವಿದೇಶಾಂಗ ನೀತಿ ಕುರಿತು ನಾನು ಜವಾಹರಲಾಲ್ ಮತ್ತು ಗಾಂಧಿ ವಿಚಾರಧಾರೆಯ ಬಗ್ಗೆ ನಾನು ಹೇಳಿದ ಮಾತನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿವೆ ಎಂದಿರುವ ಅವರು, ಮಾಧ್ಯಮಗಳು ಲಾರ್ಡ್ ಪಾರಿಖ್ ಅವರ ಹೇಳಿಕೆಯನ್ನು ನನ್ನ ಮೇಲೆ ಹಾಕಿ ವರದಿ ಮಾಡಲಾಗಿದೆ. ಇದು ನಿಜವಾದ ಪತ್ರಿಕಾಧರ್ಮವಲ್ಲ ಹಾಗೂ ಬೇಜವಾಬ್ದಾರಿತನದ ವರದಿಗಾರಿಕೆ. ಆ ನಿಟ್ಟಿನಲ್ಲಿ ಮಾಧ್ಯಮಗಳು ಸ್ಪಷ್ಟನೆ ನೀಡಬೇಕೆಂದು ಬಯಸುತ್ತೇನೆ ಎಂದು ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿಕೊಂಡರು.
ದೆಹಲಿಯಲ್ಲಿ ಶುಕ್ರವಾರ ನಡೆದ ಉಪನ್ಯಾಸ ಕಾರ್ಯಕ್ರಮವೊಂದರಲ್ಲಿ ತರೂರ್, ಭಾರತದ ಪರಂಪರೆಯನ್ನೇ ಮೂಲವಾಗಿಟ್ಟು ಗಾಂಧಿ ಹಾಗೂ ನೆಹರು ವಿದೇಶಾಂಗ ನೀತಿ ರೂಪಿಸಿದ್ದರು. ಆ ಕಾರಣಕ್ಕಾಗಿಯೇ ಭಾರತ ಜಾಗತಿಕ ಮಟ್ಟದಲ್ಲಿ ಅಸ್ತಿತ್ವ ಕಂಡುಕೊಳ್ಳುವಂತಾಯಿತು. ಆದರೆ ವೀಕ್ಷಕ ವಿವರಣೆ ನೀಡುವ ರೀತಿಯಲ್ಲಿ ಇತರ ದೇಶಗಳ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸುವ ಭಾರತದ ವಿದೇಶಾಂಗ ನೀತಿ ಋಣಾತ್ಮಕ ಎಂದು ಜಗತ್ತಿನಲ್ಲಿ ಹೆಸರು ಪಡೆಯಿತು ಎಂದು ಹೇಳಿದ್ದರು. ಈ ಹೇಳಿಕೆ ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು.
ಈ ಹೇಳಿಕೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಅಲ್ಲದೇ ಜವಾಹರಲಾಲ್ ನೆಹರು ಅವರ ವಿದೇಶಾಂಗ ನೀತಿಯನ್ನು ಅವರೊಬ್ಬ ಕಾಂಗ್ರೆಸ್ಸಿಗರಾಗಿ ಅನುಸರಿಸಬೇಕು ಎಂದು ಹೇಳಿತ್ತು.