ಭಾರತ-ಪಾಕಿಸ್ತಾನ ಗಡಿಯಲ್ಲಿ ಸ್ಫೋಟಗೊಳಿಸುವ ಮೂಲಕ ಬೇಲಿಯನ್ನು ತುಂಡರಿಸಿ ಒಳ ನುಸುಳಲು ಯತ್ನಿಸಿದ ಭಯೋತ್ಪಾದಕರ ಮತ್ತೊಂದು ಸಂಚನ್ನು ಗಡಿ ಭದ್ರತಾ ಪಡೆಗಳು ವಿಫಲಗೊಳಿಸಿವೆ.
ಒಂದೇ ವಾರದಲ್ಲಿ ನಾಲ್ಕನೇ ಬಾರಿ ನುಸುಳಲು ಯತ್ನಿಸಿರುವ ಉಗ್ರರು, ಸೋಮವಾರ ಮುಂಜಾನೆ ಗಡಿಯಲ್ಲಿ ಸ್ಫೋಟ ನಡೆಸಿದ ಬಳಿಕ ಸೇನೆ ಗುಂಡಿನ ಪ್ರತಿ ದಾಳಿ ನಡೆಸಿದಾಗ ನುಸುಳುಕೋರರು ಕಾಲ್ಕಿತ್ತಿದ್ದಾರೆ ಎಂದು ಸೇನೆ ಮೂಲಗಳು ಹೇಳಿವೆ.
ಜಮ್ಮು ಜಿಲ್ಲೆಯ ಅಖ್ನೂರ್ ವಲಯದ ಅಲ್ಫಾ ಮಾಕೆಲ್ ಗಡಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ದಟ್ಟ ಮಂಜು ಕವಿದಿರುವುದರ ಲಾಭ ಪಡೆದ ಭಯೋತ್ಪಾದಕರ ಗುಂಪೊಂದು ಮೊದಲು ಗಡಿಯ ಸಮೀಪ ಸ್ಫೋಟ ನಡೆಸಿತ್ತು.
ಆಗ ಗಡಿ ಭದ್ರತಾ ಪಡೆಯ (ಬಿಎಸ್‌ಎಫ್) 122ನೇ ತುಕಡಿಯು ನುಸುಳಲು ಯತ್ನಿಸಿದ ಉಗ್ರರತ್ತ ಗುಂಡಿನ ಮಳೆಗರೆಯಿತು. ಸುಮಾರು ಒಂದು ಗಂಟೆಗಳಷ್ಟು ಕಾಲ ಉಗ್ರರು ಮತ್ತು ಸೇನೆಯ ನಡುವೆ ಗುಂಡಿನ ಚಕಮಕಿ ನಡೆದ ಬಳಿಕ, ನುಸುಳುಕೋರರು ಕಾಲ್ಕಿತ್ತಿದ್ದಾರೆ.
ಘಟನೆಯಿಂದಾಗಿ ಗಡಿ ಬೇಲಿಯು ಸಂಪೂರ್ಣ ಧ್ವಂಸವಾಗಿದೆ. ಚಕಮಕಿ ಸಂದರ್ಭದಲ್ಲಿ ಭಯೋತ್ಪಾದಕರು ಒಳ ನುಸುಳಿದ್ದಾರೆಯೇ ಎಂಬುದನ್ನು ಪತ್ತೆ ಹಚ್ಚಲು ಇದೀಗ ಸೇನೆಯು ತನ್ನ ಕಾರ್ಯಾಚರಣೆ ಆರಂಭಿಸಿದೆ.
ಜನವರಿ 4ರಂದು ಸಾಂಬಾ ಜಿಲ್ಲೆಯಲ್ಲಿ, ಜನವರಿ 8ರಂದು ಪೂಂಛ್ ಜಿಲ್ಲೆಯಲ್ಲಿ ಹಾಗೂ ಭಾನುವಾರ ಜಮ್ಮು ಜಿಲ್ಲೆಯ ಗರ್ಖಾಲ್ ಎಂಬಲ್ಲಿ ಭಯೋತ್ಪಾದಕರು ಭಾರತದೊಳಗೆ ನುಸುಳಲು ಯತ್ನಿಸಿದ್ದರು. ಇಂದು ಮತ್ತೊಂದು ಯತ್ನ ನಡೆಯುವುದರೊಂದಿಗೆ ವಾರದ ಅವಧಿಯೊಳಗೆ ನಾಲ್ಕನೇ ಪ್ರಕರಣವನ್ನು ಭಾರತ ಎದುರಿಸುವಂತಾಗಿದೆ.
ಗಡಿ ಪ್ರದೇಶದಾದ್ಯಂತ 700ಕ್ಕೂ ಹೆಚ್ಚು ಭಯೋತ್ಪಾದಕರು ಭಾರತದೊಳಗೆ ನುಸುಳಲು ಕಾಯುತ್ತಿದ್ದಾರೆ ಎಂದು ಇತ್ತೀಚೆಗಷ್ಟೇ ಗೃಹ ಮತ್ತು ರಕ್ಷಣಾ ಇಲಾಖೆ ಹೇಳಿತ್ತು. ಉಗ್ರರು ಆಗಾಗ ಗಡಿಯಲ್ಲಿ ಗೊಂದಲಗಳನ್ನು ಸೃಷ್ಟಿಸುವ ಮೂಲಕ ನುಸುಳಲು ಯತ್ನಿಸುವುದು ತಂತ್ರಗಾರಿಕೆ ಎಂದು ಸೇನಾಧಿಕಾರಿಗಳು ಹೇಳಿದ್ದಾರೆ.