ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರುಚಿಕಾ ತಂದೆ ನನ್ನ ಗಂಡನಾಗಿದ್ದರು ಎನ್ನುತ್ತಿದ್ದಾಳೆ ಈಕೆ..! (Ruchika Girhotra | SPS Rathore | Veena | SC Girhotra)
Bookmark and Share Feedback Print
 
ಹರ್ಯಾಣ ಪೊಲೀಸ್ ಮಾಜಿ ಮುಖ್ಯಸ್ಥ ಎಸ್‌ಪಿಎಸ್ ರಾಥೋಡ್‌ ಅವರಿಂದ ಲೈಂಗಿಕ ಕಿರುಕುಳಕ್ಕೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ ರುಚಿಕಾ ಗಿರೋತ್ರಾಳ ತಂದೆ ಎಸ್‌ಸಿ ಗಿರೋತ್ರಾ ಅವರು ನನ್ನನ್ನು ಈ ಹಿಂದೆ ಮದುವೆಯಾಗಿದ್ದರು ಎಂದು ವೀಣಾ ಎಂಬ ಮಹಿಳೆಯೊಬ್ಬರು ಹೇಳುವುದರೊಂದಿಗೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ.

1990ರ ನವೆಂಬರ್ ತಿಂಗಳಿಂದ 1995ರ ನಡುವೆ ರುಚಿಕಾಳ ತಂದೆ ತನ್ನನ್ನು ಮದುವೆಯಾಗಿದ್ದರು ಎಂದು ಹರ್ಯಾಣ ಪೊಲೀಸ್ ವಿಶೇಷ ತನಿಖಾ ದಳಕ್ಕೆ (ಸಿಟ್) ವೀಣಾ ತಿಳಿಸಿದ್ದಾರೆ. ಆದರೆ ವೀಣಾ ವಾದವನ್ನು ಗಿರೋತ್ರಾ ಕುಟುಂಬದ ಗೆಳೆಯರು ಮತ್ತು ವಕೀಲರು ತಳ್ಳಿ ಹಾಕಿದ್ದಾರೆ.

ಈಗ ಮತ್ತೊಬ್ಬರನ್ನು ಮದುವೆಯಾಗಿ ಇಲ್ಲಿನ ಸೆಕ್ಟರ್ 10ರಲ್ಲಿ ವಾಸಿಸುತ್ತಿರುವ ವೀಣಾ ಸಿಟ್ ವಿಚಾರಣೆ ಸಂದರ್ಭದಲ್ಲಿ ಇದನ್ನು ಬಹಿರಂಗಪಡಿಸಿದ್ದಾರೆ.

ರುಚಿಕಾ ಲೈಂಗಿಕ ಕಿರುಕುಳ ಪ್ರಕರಣ ನಡೆದ (1990ರ ಆಗಸ್ಟ್ 12) ಮೂರು ತಿಂಗಳ ಬಳಿಕ ತನ್ನನ್ನು 1990ರ ನವೆಂಬರ್‌ನಲ್ಲಿ ಗಿರೋತ್ರಾ ಮದುವೆಯಾಗಿದ್ದರು. ಆದರೆ 1995ರಿಂದ ನನ್ನಿಂದ ಬೇರ್ಪಟ್ಟಿದ್ದರು ಎಂದು ವೀಣಾ ತಿಳಿಸಿದ್ದಾರೆ.

ರಾಥೋಡ್ ಅವರಿಂದ ಲೈಂಗಿಕ ಕಿರುಕುಳಕ್ಕೊಳಗಾದ ರುಚಿಕಾ ಮೂರು ವರ್ಷಗಳ ನಂತರ 1993ರ ಡಿಸೆಂಬರ್ 28ರಂದು ಆತ್ಮಹತ್ಯೆಗೆ ಶರಣಾಗಿದ್ದಳು.

ರಾಥೋಡ್ ವಿರುದ್ಧ ಕಳೆದ 19 ವರ್ಷಗಳಿಂದ ಕಾನೂನು ಹೋರಾಟ ನಡೆಸುತ್ತಿರುವ ರುಚಿಕಾಳ ಗೆಳತಿ ಆರಾಧನಾ ಅವರ ತಂದೆ ಆನಂದ್ ಪ್ರಕಾಶ್ ಮತ್ತು ಬಲಿಪಶುವಿನ ಪರ ವಕೀಲ ಪಂಕಜ್ ಭಾರದ್ವಾಜ್ ವೀಣಾ ವಾದವನ್ನು ಒಪ್ಪಲು ಸಿದ್ಧರಿಲ್ಲ.

ನನಗೆ ಗೊತ್ತಿದ್ದ ಪ್ರಕಾರ ವೀಣಾರನ್ನು ಗಿರೋತ್ರಾ ಮದುವೆಯಾಗಿರಲಿಲ್ಲ. ಈ ಪಾತ್ರವನ್ನು ಪ್ರಕರಣದೊಳಕ್ಕೆ ತಂದಿರುವುದು ರಾಥೋಡ್. ಇದರ ಹಿಂದೆ ಆಕೆಯ ಮೇಲೆ ಯಾವ ರೀತಿಯ ಒತ್ತಡ, ಆಮಿಷಗಳನ್ನು ಹೇರಲಾಗಿದೆ ಎಂಬುದೂ ನನಗೆ ಗೊತ್ತಿಲ್ಲ. ಅವರು ಗಿರೋತ್ರಾ ಅವರ ಪತ್ನಿ ಆಗಿದ್ದರಾದರೆ, ಮದುವೆ ದಾಖಲೆಗಳು ಮತ್ತು ವಿಚ್ಛೇದನ ದಾಖಲೆಗಳನ್ನು ಬಹಿರಂಗಪಡಿಸಲಿ ಎಂದು ಆನಂದ್ ಪ್ರಕಾಶ್ ಆಗ್ರಹಿಸಿದ್ದಾರೆ.

ರುಚಿಕಾ ಲೈಂಗಿಕ ಕಿರುಕುಳ ಮತ್ತು ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಹಲವು ಪ್ರಕರಣಗಳನ್ನು ಎದುರಿಸುತ್ತಿರುವ ರಾಥೋಡ್ ಈ ರೀತಿಯ ಘಟನಾವಳಿಗಳನ್ನು ಸೃಷ್ಟಿಸುತ್ತಿದ್ದು, ತನಿಖೆಯ ಹಾದಿ ತಪ್ಪಿಸಲು ಯತ್ನಿಸುತ್ತಿದ್ದಾರೆ. ಆದರೆ ಇವುಗಳಿಂದ ರುಚಿಕಾ ಪ್ರಕರಣಕ್ಕೆ ಯಾವುದೇ ಧಕ್ಕೆಯಾಗದು ಎಂದು ಅವರ ವಕೀಲರು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ