ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಅಮರ್ ಸಿಂಗ್ ವಜಾ ಮಾಡಿ: ಮುಸ್ಲಿಂ ಮುಖಂಡರ ಆಗ್ರಹ
(SP Muslim leaders | Samajwadi Party | Amar Singh | Mulayam Singh Yadav)
ಅಮರ್ ಸಿಂಗ್ ಪಕ್ಷದ ಹಿತಾಸಕ್ತಿಗಳಿಗೆ ಧಕ್ಕೆ ಮಾಡಿದ್ದಾರೆ ಎಂದು ಆರೋಪಿಸಿರುವ ಸಮಾಜವಾದಿ ಪಕ್ಷದ ಮುಸ್ಲಿಂ ನಾಯಕರ ಗುಂಪೊಂದು, ಆ ಶೋಕಿವಾಲ ನಾಯಕನನ್ನು ಪಕ್ಷದಿಂದಲೇ ಕಿತ್ತು ಹಾಕುವಂತೆ ಆಗ್ರಹಿಸಿದ್ದಾರೆ.
ಅಮರ್ ಸಿಂಗ್ ಪಕ್ಷದ ಎಲ್ಲಾ ಹುದ್ದೆಗಳಿಗೆ ನೀಡಿರುವ ರಾಜೀನಾಮೆಯನ್ನು ಮುಲಾಯಂ ಸಿಂಗ್ ಯಾದವ್ ಅವರು ಸ್ವೀಕರಿಸಬೇಕು ಮತ್ತು ಅವರನ್ನು ಪಕ್ಷದಿಂದಲೇ ವಜಾ ಮಾಡಬೇಕು ಎಂದು ನವದೆಹಲಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅಮ್ರೋಹಾ ಕ್ಷೇತ್ರದ ಸಮಾಜವಾದಿ ಶಾಸಕ ಮೆಹಬೂಬ್ ಆಲಿ ಒತ್ತಾಯಿಸಿದರು.
PTI
ಅಮರ್ ಪಕ್ಷದ ವಿಶ್ವಾಸರ್ಹತೆಗೆ ಧಕ್ಕೆಯನ್ನುಂಟು ಮಾಡಿದ್ದಾರೆ, ಇದು ನಾಯಕರಿಗೆ ಹೇಳಿ ಮಾಡಿಸಿದ್ದಲ್ಲ ಎಂದು ಆಲಿ ತಿಳಿಸಿದರು.
ಅಮರ್ ರಾಜೀನಾಮೆಯನ್ನು ಸ್ವೀಕರಿಸುವುದಿಲ್ಲ ಎಂದು ಮುಲಾಯಂ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಆಲಿ, ಸಮಾಜವಾದಿ ಮುಖಂಡರು ಪಕ್ಷದ ವಲಯದಲ್ಲಿ ಇನ್ನಷ್ಟೇ ಈ ಕುರಿತು ಚರ್ಚಿಸಬೇಕಿದೆ ಎಂದರು.
ಸಾಂಬಾಲ್ ಕ್ಷೇತ್ರದ ಶಾಕ ಇಕ್ಬಾಲ್ ಮೆಹಮೂದ್, ಮೀರತ್ ಜಿಲ್ಲೆಯ ಕಿತ್ತೂರ್ ಕ್ಷೇತ್ರದ ಶಾಸಕ ಶಾಹಿದ್ ಮಂಜೂರ್, ಮೀರತ್‌ನ ಸಮಾಜವಾದಿ ಯುವ ಘಟಕದ ಅಧ್ಯಕ್ಷ ವಾಸಿಂ ರಾಜಾ ಮತ್ತು ಮೊರಾದಾಬಾದ್ ಮಾಜಿ ಜಿಲ್ಲಾಧ್ಯಕ್ಷ ಜಾವೇದ್ ಖಾನ್ ಕೂಡ ಇದೇ ಸಂದರ್ಭದಲ್ಲಿ ಅಮರ್ ವಜಾಗೊಲಿಸಲು ಆಗ್ರಹಿಸಿದ್ದಾರೆ.
ಬಾಲಿವುಡ್ ನಟ ಸಂಜಯ್ ದತ್ ಮತ್ತು ಭೋಜಪುರಿ ಕಲಾವಿದ ಮನೋಜ್ ತಿವಾರಿ ಅವರು ಕೂಡ ಪಕ್ಷದ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರಲ್ಲವೇ ಎಂದಾಗ, ಜನ ಗುಂಪಿನಲ್ಲಿ ಬರುತ್ತಾರೆ ಮತ್ತು ಗುಂಪಿನಲ್ಲೇ ಹೋಗುತ್ತಾರೆ ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ ಆಲಿ.
ಸಮಾಜವಾದಿ ಪಕ್ಷದ ಎಲ್ಲಾ ಹುದ್ದೆಗಳಿಗೆ ಕಳೆದ ವಾರ ಅಮರ್ ಸಿಂಗ್ ರಾಜೀನಾಮೆ ಸಲ್ಲಿಸಿದ್ದರು. ಮುಲಾಯಂ ಸಿಂಗ್ ಪಕ್ಷದ ವಿಚಾರಗಳಲ್ಲಿ ತೆಗೆದುಕೊಳ್ಳುತ್ತಿರುವ ಸರ್ವಾಧಿಕಾರಿ ನಿರ್ಧಾರಗಳನ್ನು ವಿರೋಧಿಸಿ ಅಮರ್ ಈ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ.