ಜೈಲು ಕಂಬಿ ಎಣಿಸಿದ ದಾಖಲೆಗಳನ್ನು ನೀಡಿದವರಿಗೆ ಮಾತ್ರ ಚುನಾವಣೆಯಲ್ಲಿ ನಿಲ್ಲಲು ನನ್ನ ಪಕ್ಷದ ಟಿಕೆಟುಗಳನ್ನು ನೀಡುವುದಾಗಿ ರಾಷ್ಟ್ರೀಯ ಜನತಾ ದಳದ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹೇಳಿದ್ದಾರೆ.
ಆರ್‌ಜೆಡಿಯ ಅಭ್ಯರ್ಥಿಗಿರಬೇಕಾದ ಮೊದಲ ಅರ್ಹತೆಯೇ ಜೈಲಿನಲ್ಲಿ ಕಾಲ ಕಳೆದಿರುವುದು. ಅದರ ಮೇಲೆ ಅಭ್ಯರ್ಥಿತನವನ್ನು ನಿರ್ಧರಿಸಲಾಗುತ್ತದೆ ಎಂದು ಪಾಟ್ನಾದಲ್ಲಿ ಕರೆದಿದ್ದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಾ ಲಾಲೂ ತಿಳಿಸಿದರು.
PTI
ಪಕ್ಷದ ಟಿಕೆಟಿಗಾಗಿ ಜೈಲಿನಲ್ಲಿ ತಾವು ಕಳೆದ ಬಗ್ಗೆ ಅಥವಾ ಈಗಲೂ ಜೈಲಿನಲ್ಲಿರುವ ಬಗ್ಗೆ ಜೈಲಿನ ಅಧಿಕಾರಿಗಳಿಂದ ಪ್ರಮಾಣ ಪತ್ರವನ್ನು ತರುವವರು ನನಗೆ ಬೇಕಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಜೈಲಿನಲ್ಲಿ ಕಾಲ ಕಳೆಯುವುದರಿಂದಾಗುವ ಲಾಭಗಳನ್ನೂ ಲಾಲೂ ವಿವರಿಸಿದ್ದಾರೆ. ಸೆರೆಮನೆಯಲ್ಲಿದ್ದರೆ ಉಚಿತ ಔಷಧಿ, ಬಟ್ಟೆ, ಹೊದಿಕೆ ಮತ್ತು ಉತ್ತಮ ಹಾಸಿಗೆಯನ್ನೂ ಪಡೆಯಬಹುದು ಎಂದರು.
ಅಂಗರಕ್ಷಕರು ಬೇಕೇ ಬೇಕೆನ್ನುವವರು ಕೂಡ ಚಿಂತೆ ಮಾಡಬೇಕಾದ ಅಗತ್ಯವಿಲ್ಲ. ಯಾಕೆಂದರೆ ಜೈಲಿನಲ್ಲಿದ್ದರೆ ಭದ್ರತಾ ಸಿಬ್ಬಂದಿಗಳು ನೀವೆಲ್ಲಿ ಹೋದರೂ ನಿಮ್ಮ ಜತೆಗೇ ಇದ್ದು ರಕ್ಷಣೆ ನೀಡುತ್ತಾರೆ. ಅದು ಬಂದೀಖಾನೆಯೊಳಗಿರಬಹುದು ಅಥವಾ ನೀವು ನ್ಯಾಯಾಲಯ ಮತ್ತು ಆಸ್ಪತ್ರೆಗಳಿಗೆ ಹೋಗುವ ಸಂದರ್ಭವಾಗಿರಬಹುದು, ನಿಮ್ಮನ್ನು ಕೈ ಬಿಡುವುದಿಲ್ಲ ಎಂದು ಲಾಲೂ ವ್ಯಂಗ್ಯ ತುಂಬಿದ ದನಿಯಲ್ಲಿ ವಿವರಣೆ ನೀಡಿದರು.
ಆರ್‌ಜೆಡಿಯು ರಾಜ್ಯವ್ಯಾಪಿ ಬಂದ್ ಮತ್ತು ಜೈಲ್ ಭರೋ ಕಾರ್ಯಕ್ರಮಕ್ಕೆ ಕರೆ ನೀಡಿದ 15 ದಿನಗಳ ನಂತರ ಲಾಲೂ ಈ ಹೇಳಿಕೆ ನೀಡಿದ್ದಾರೆ. ಅವರ ಉದ್ದೇಶಿತ ಪ್ರತಿಭಟನೆಗಾಗಿ ಕಾರ್ಯಕರ್ತರನ್ನು ಉತ್ತೇಜಿಸಲು ಈ ಹೇಳಿಕೆಯನ್ನು ನೀಡಿದ್ದಾರೆ ಎಂದು ಹೇಳಲಾಗಿದೆ.