ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಟೀಕೆ ನಾವೂ ಮಾಡ್ತೇವೆ, ಆದ್ರೆ ಗೌಡ್ರ ಮಟ್ಟದ್ದಲ್ಲ: ಕಾಂಗ್ರೆಸ್ (HD Deve Gowda | Former Prime Minister | Karnataka | BS Yedyurappa)
ಟೀಕೆ ನಾವೂ ಮಾಡ್ತೇವೆ, ಆದ್ರೆ ಗೌಡ್ರ ಮಟ್ಟದ್ದಲ್ಲ: ಕಾಂಗ್ರೆಸ್
ನವದೆಹಲಿ, ಸೋಮವಾರ, 11 ಜನವರಿ 2010( 19:48 IST )
ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಬಳಸಿರುವ ಅಸಾಂವಿಧಾನಿಕ ಟೀಕೆಗಳನ್ನು ಖಂಡಿಸಿರುವ ಕಾಂಗ್ರೆಸ್, ರಾಜಕೀಯದಲ್ಲಿ ನಿಂದನಾತ್ಮಕ ಭಾಷೆಗಳಿಗೆ ಅವಕಾಶವಿಲ್ಲ; ಟೀಕೆಗಳನ್ನೂ ನಾವೂ ಪ್ರತಿಪಕ್ಷವಾಗಿ ಮಾಡುತ್ತೇವೆ, ಆದರೆ ಯಾವತ್ತೂ ಕೆಳಮಟ್ಟಕ್ಕಿಳಿದಿಲ್ಲ ಮತ್ತು ಇಳಿಯುವುದಿಲ್ಲ ಎಂದಿದೆ.
ಗೌಡರು ಬಳಸಿರುವ ಭಾಷೆಯನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ರಾಜಕೀಯದಲ್ಲಿ ಈ ರೀತಿಯ ತೆಗಳಿಕೆಗಳಿಗೆ ಅವಕಾಶವಿಲ್ಲ ಎಂದು ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದ ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ತಿಳಿಸಿದ್ದಾರೆ.
PR
ಇಂತಹ ರಾಜಕೀಯಗಳಿಗೆ ತನ್ನ ಪಕ್ಷವು ವಿರುದ್ಧವಾಗಿದೆ ಎಂದ ಅವರು, ರಾಜಕೀಯದ ಘನತೆಯನ್ನು ಕಾಪಾಡಿಕೊಳ್ಳುವುದು ಎಲ್ಲಾ ರಾಜಕಾರಣಿಗಳ ಜವಾಬ್ದಾರಿಯಾಗಿದೆ ಎಂದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಪ್ರಬಲ ಮತ್ತು ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ನೋಡುವ ಪ್ರತಿಪಕ್ಷವಾಗಿದೆ ಮತ್ತು ರಾಜ್ಯದಲ್ಲಿನ ಬಿಜೆಪಿ ಸರಕಾರದ ನೀತಿಗಳನ್ನು ಟೀಕಿಸಲು ಯಾವತ್ತೂ ಹಿಂದೆ ಮುಂದೆ ನೋಡಿಲ್ಲ. ಆದರೆ ಯಾವುದೇ ಕಾರಣಕ್ಕೂ ನಾವು ನಿಂದನೆಯ ರಾಜಕೀಯವನ್ನು ಅನುಸರಿಸುವುದಿಲ್ಲ. ಅಂತಹ ಶಬ್ದಗಳಿಗೆ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಜಾಗವಿಲ್ಲ ಎಂದು ಸಿಂಘ್ವಿ ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ವಕ್ತಾರೆ ಜಯಂತಿ ನಟರಾಜನ್ ಕೂಡ ಗೌಡರ ಕೆಳಮಟ್ಟದ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಟೀಕೆ ಯಾವುದೇ ಕಾರಣಕ್ಕೂ ಘನತೆಯನ್ನು ಕಳೆದುಕೊಳ್ಳಬಾರದು, ಮಾಜಿ ಪ್ರಧಾನಿಯಾಗಿರುವ ಗೌಡರು ಈ ಮಟ್ಟಕ್ಕೆ ಇಳಿಯಬಾರದಿತ್ತು ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ನೈಸ್ ರಸ್ತೆಯ ಅಕ್ರಮಗಳ ಕುರಿತು ಕೋಪೋದ್ರಿಕ್ತರಾಗಿದ್ದ ಮಾಜಿ ಪ್ರಧಾನಿಗಳು, ಯಡಿಯೂರಪ್ಪನವರನ್ನು ಬ್ಲಡಿ ಬಾಸ್ಟರ್ಡ್, ಬೋಸುಡಿ ಮಗ ಎಂದೆಲ್ಲ ತೀರಾ ಅನಾಗರಿಕ ಪದಗಳಿಂದ ಟೀಕಿಸಿದ್ದರು.
ಈ ಶಬ್ದಗಳನ್ನು ತಾನು ಬಳಕೆ ಮಾಡಬಾರದಿತ್ತು. ನಂತರ ಅದನ್ನು ಹಿಂತೆಗೆದುಕೊಂಡಿದ್ದೇನೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರಾದರೂ, ಕ್ಷಮೆ ಯಾಚಿಸಲು ಗೌಡ ನಿರಾಕರಿಸಿದ್ದಾರೆ.