2005ರ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್ ಪ್ರಕರಣದ ತನಿಖೆಯನ್ನು ಸಿಬಿಐಗೆ ಸರ್ವೋಚ್ಚ ನ್ಯಾಯಾಲಯವು ಹಸ್ತಾಂತರಿಸುವುದರೊಂದಿಗೆ ನರೇಂದ್ರ ಮೋದಿ ನೇತೃತ್ವದ ಗುಜರಾತ್ ಸರಕಾರ ಮಂಗಳವಾರ ಮಹತ್ವದ ಹಿನ್ನಡೆ ಅನುಭವಿಸಿದೆ.
ಗುಜರಾತ್ ಪೊಲೀಸರಿಂದ ನಕಲಿ ಎನ್‌ಕೌಂಟರ್‌ಗೆ ಬಲಿಯಾಗಿದ್ದ ಸೊಹ್ರಾಬುದ್ದೀನ್ ಶೇಖ್ ಸಹೋದರ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದರು. ನ್ಯಾಯಮೂರ್ತಿಗಳಾದ ತರುಣ್ ಚಟರ್ಜಿ ಮತ್ತು ಅಫ್ತಾಬ್ ಆಲಂ ಅವರನ್ನೊಳಗೊಂಡ ಪೀಠವು ಇಂದು ಈ ಸಂಬಂಧ ಒಪ್ಪಿಗೆ ನೀಡಿದ್ದು, ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿದೆ.
PR
ಈ ಪ್ರಕರಣವನ್ನು ರಾಜ್ಯದ ವಿಶೇಷ ತನಿಖಾ ದಳ (ಸಿಟ್) ಯಾವುದೇ ತಾರತಮ್ಯವಿಲ್ಲದೆ ತನಿಖೆ ನಡೆಸುತ್ತಿದೆ ಎಂದು ಗುಜರಾತ್‌ನ ಬಿಜೆಪಿ ಸರಕಾರವು ಹೇಳುತ್ತಾ ಬಂದಿದ್ದು, ಸುಪ್ರೀಂ ನಿರ್ಧಾರದಿಂದಾಗಿ ಭಾರೀ ಹಿನ್ನಡೆ ಅನುಭವಿಸಿದೆ.
ಸೊಹ್ರಾಬುದ್ದೀನ್‌ನನ್ನು ನಕಲಿ ಎನ್‌ಕೌಂಟರ್‌ನಲ್ಲಿ ಕೊಂದು ಹಾಕಿದ್ದ ಗುಜರಾತ್ ಪೊಲೀಸರು ಸ್ವಲ್ಪ ದಿನದ ಅಂತರದಲ್ಲಿ ಆತನ ಪತ್ನಿ ಕೌಸರ್ಬಿಯವರನ್ನೂ ಕೊಂದು ಹಾಕಿದ್ದರು. ಇದು ನಕಲಿ ಎನ್‌ಕೌಂಟರ್ ಹೌದೆಂದು ಒಪ್ಪಿಕೊಂಡಿದ್ದ ಗುಜರಾತ್ ಸರಕಾರ, ಹಲವು ಪೊಲೀಸ್ ಅಧಿಕಾರಿಗಳನ್ನು ಬಂಧಿಸಿತ್ತು.
ಭಯೋತ್ಪಾದಕನಾಗಿರುವ ಸೊಹ್ರಾಬುದ್ದೀನ್ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಹತ್ಯೆಗೈಯಲು ಸಂಚು ರೂಪಿಸುತ್ತಿದ್ದ ಎಂದು ಆರೋಪಿಸಿದ್ದ ಪೊಲೀಸರು 2005ರ ನವೆಂಬರ್ 26ರಂದು ಅಹಮದಾಬಾದ್ ಸಮೀಪ ಕೊಂದು ಹಾಕಿದ್ದರು.
ಇದನ್ನು ಕಣ್ಣಾರೆ ನೋಡಿದ್ದ ಸೊಹ್ರಾಬುದ್ದೀನ್ ಪತ್ನಿ ಮತ್ತು ಸಹಾಯಕ ಪ್ರಜಾಪತಿ ಎಂಬಾತನನ್ನೂ ನಂತರ ಕೊಲ್ಲಲಾಗಿತ್ತು.
14 ಪೊಲೀಸರು ನಕಲಿ ಎನ್‌ಕೌಂಟರ್‌ನಲ್ಲಿ ಭಾಗಿಯಾಗಿದ್ದಾರೆ ಎಂದು ಪ್ರಕರಣ ದಾಖಲಾಗಿದ್ದು, ಇವರೆಲ್ಲರೂ ಸಿಬಿಐ ತನಿಖೆಗೊಳಪಡಲಿದ್ದಾರೆ.