ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಖ್ಯ ನ್ಯಾಯಮೂರ್ತಿ ಕಚೇರಿಯೂ ಆರ್‌ಟಿಐ ಕಾಯ್ದೆ ವ್ಯಾಪ್ತಿಗೆ
(Right to Information | RTI | Chief Justice of India | Delhi High Court)
ಮುಖ್ಯ ನ್ಯಾಯಮೂರ್ತಿ ಕಚೇರಿಯೂ ಆರ್‌ಟಿಐ ಕಾಯ್ದೆ ವ್ಯಾಪ್ತಿಗೆ
ನವದೆಹಲಿ, ಮಂಗಳವಾರ, 12 ಜನವರಿ 2010( 13:03 IST )
ಭಾರತದ ಮುಖ್ಯ ನ್ಯಾಯಮೂರ್ತಿಗಳ ಕಚೇರಿಯು ಸಾರ್ವಜನಿಕ ಆಸ್ತಿಯಾಗಿರುವುದರಿಂದ ನ್ಯಾಯಮೂರ್ತಿಗಳ ಆಸ್ತಿ ವಿವರಗಳು ಮಾಹಿತಿ ಹಕ್ಕು ಕಾಯ್ದೆಯಡಿಗೆ ಬರುತ್ತವೆ ಎಂಬ ಐತಿಹಾಸಿಕ ತೀರ್ಪನ್ನು ದೆಹಲಿ ಉಚ್ಚ ನ್ಯಾಯಾಲಯ ಮಂಗಳವಾರ ನೀಡಿದೆ.
ಈ ಹಿಂದೆ ಏಕಸದಸ್ಯ ಪೀಠ ನೀಡಿದ್ದ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ಎ.ಪಿ. ಶಾ ಹಾಗೂ ಎಸ್. ಮುರಳೀಧರ್ ಮತ್ತು ವಿಕ್ರಮಜಿತ್ ಸೇನ್ ಅವರನ್ನೊಳಗೊಂಡ ಪೀಠವು ಎತ್ತಿ ಹಿಡಿದಿದ್ದು, ನ್ಯಾಯಾಂಗದ ಔನ್ನತ್ಯ ಹೆಚ್ಚಿರುವಂತೆಯೇ ಅದಕ್ಕೆ ಸಾರ್ವಜನಿಕರ ಬಗೆಗಿನ ಹೊಣೆಗಾರಿಕೆಯೂ ಉನ್ನತ ಮಟ್ಟದಲ್ಲಿರುತ್ತದೆ ಎಂದು ಹೇಳಿದೆ.
ಮಾಹಿತಿ ಹಕ್ಕು ಕಾಯ್ದೆಯ ಮಹತ್ವವನ್ನು ಒತ್ತಿ ಹೇಳಿರುವ ಪೀಠವು, ಮಾಹಿತಿ ಹಕ್ಕು ಅತಿ ಹೆಚ್ಚಿನ ಪ್ರಭಾವ ಹೊಂದಿರುತ್ತದೆ. ಇಂತಹ ಮಾಹಿತಿಗಳನ್ನು ಬಯಸುವ ನಾಗರಿಕರು, ಅವುಗಳ ದುರುಪಯೋಗ ಮಾಡಬಾರದು. ಆ ಮೂಲಕ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಯನ್ನು ರಕ್ಷಿಸಬೇಕು ಎಂದು ತಿಳಿಸಿದೆ.
ಮುಖ್ಯ ನ್ಯಾಯಾಧೀಶರು ಇತರ ನ್ಯಾಯಾಧೀಶರುಗಳೊಂದಿಗೆ ವಿಶ್ವಸನೀಯ ಸಂಬಂಧ ಹೊಂದಿರಬೇಕೆಂದು ಹೇಳುವಂತಿಲ್ಲ ಎಂಬುದಾಗಿ ದೆಹಲಿ ಹೈಕೋರ್ಟ್ ಹೇಳಿರುವುದರೊಂದಿಗೆ, ಉನ್ನತ ನ್ಯಾಯಾಲಯಗಳ ನ್ಯಾಯಾಧೀಶರುಗಳು ತಮ್ಮ ಆಸ್ತಿ ವಿವರಗಳನ್ನು ಮುಂದಿನ ವಾರದೊಳಗೆ ಪ್ರಕಟಿಸುವಂತೆಯೂ ಆದೇಶ ನೀಡಿದೆ.
ಮುಖ್ಯ ನ್ಯಾಯಮೂರ್ತಿಗಳ ಕಚೇರಿಯು ಸಾರ್ವಜನಿಕ ಆಸ್ತಿಯಾಗಿದ್ದು, ಇದು ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಬರುತ್ತದೆ ಎಂದು ಮಾಹಿತಿ ಆಯೋಗದ ಮುಖ್ಯಸ್ಥರು ನೀಡಿದ್ದ ಆದೇಶವನ್ನು ದೆಹಲಿ ಹೈಕೋರ್ಟ್ ಏಕಸದಸ್ಯ ಪೀಠವು ಈ ಹಿಂದೆ ಎತ್ತಿ ಹಿಡಿದಿತ್ತು.
ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರುಗಳ ಆಸ್ತಿ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಲು ಸುಪ್ರೀಂ ಕೋರ್ಟಿನ ಅಧಿಕೃತ ವೆಬ್‌ಸೈಟಿನಲ್ಲಿ ಪ್ರಕಟಿಸಬೇಕೆಂದು ಮುಖ್ಯ ನ್ಯಾಯಮೂರ್ತಿಗಳಿಗೆ ನ್ಯಾಯಾಲಯ ಆದೇಶ ನೀಡಿದೆ.
ತನ್ನ ಕಚೇರಿ ಮಾಹಿತಿ ಹಕ್ಕು ಕಾಯ್ದೆಯಡಿ ಬರುವುದಿಲ್ಲ ಎಂದು ಹೇಳುತ್ತಾ ಬಂದಿರುವ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಈ ಐತಿಹಾಸಿಕ ತೀರ್ಪಿನ ಪರಿಣಾಮ ತನ್ನ ಆಸ್ತಿಯನ್ನು ಪ್ರಕಟಿಸಬೇಕಾಗಿದೆ.
ದೆಹಲಿ ಹೈಕೋರ್ಟ್‌ನ ಐತಿಹಾಸಿಕ ತೀರ್ಪನ್ನು ಮಾಜಿ ನ್ಯಾಯಮೂರ್ತಿಗಳು ಸೇರಿದಂತೆ ಕಾನೂನು ತಜ್ಞರು ಸ್ವಾಗತಿಸಿರುವ ಹೊರತಾಗಿಯೂ ಇದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ನಿರ್ಧರಿಸಿದ್ದಾರೆ.