ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗೋವಾ ಸೀಎಂ, ಗೃಹಮಂತ್ರಿ ಕೊಲೆಯಾಗಲಿದ್ದಾರೆ: ಶಾಸಕ
(Drug runners | Goa Chief Minister | Congress legislator | Agnelo Fernandes)
ಡ್ರಗ್ಸ್ ಮಾಫಿಯಾವು ಗೋವಾ ಕರಾವಳಿಯಲ್ಲಿ ಪ್ರಾಬಲ್ಯ ಹೊಂದಿದ್ದು, ಶೀಘ್ರದಲ್ಲೇ ರಾಜ್ಯದ ಮುಖ್ಯಮಂತ್ರಿ ಮತ್ತು ಗೃಹಸಚಿವರನ್ನು ಮುಗಿಸುವ ಸಾಧ್ಯತೆಗಳಿವೆ ಎಂದು ಆಡಳಿತ ಪಕ್ಷದ ಶಾಸಕರೊಬ್ಬರು ಎಚ್ಚರಿಕೆ ನೀಡಿದ್ದಾರೆ.
ಗೋವಾದ ಜನಪ್ರಿಯ ಪ್ರವಾಸಿ ತಾಣವಾಗಿರುವ ಕಾಲಂಗುಟೆ ಎಂಬ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿರುವ ಅಗ್ನೆಲೋ ಫೆರ್ನಾಂಡಿಸ್, ರಾಜ್ಯದ ಪೊಲೀಸರು ಮಾದಕ ದ್ರವ್ಯ ವ್ಯವಹಾರಗಳನ್ನು ತಡೆಗಟ್ಟಲು ವಿಫಲರಾಗಿದ್ದಾರೆ ಎಂದು ಸೋಮವಾರ ತಡರಾತ್ರಿ ತಿಳಿಸಿದ್ದಾರೆ.
ಈಗಲೇ ರಾಜ್ಯದ ಡ್ರಗ್ ವ್ಯವಹಾರಗಳನ್ನು ನಿಯಂತ್ರಿಸದಿದ್ದರೆ, ಮುಂದಿನ ದಿನಗಳಲ್ಲಿ ಅವರೇ ನಮ್ಮನ್ನು ಆಳಲಿದ್ದಾರೆ. ಅವರು ನಮ್ಮ ಮುಖ್ಯಮಂತ್ರಿ ಮತ್ತು ಗೃಹಮಂತ್ರಿಯವರನ್ನೇ ಶೂಟ್ ಮಾಡಬಹುದು ಮತ್ತು ಆಗ ನಾವು ಅವರ ಮೇಲೆ ಯಾವುದೇ ನಿಯಂತ್ರಣವನ್ನೂ ಹೊಂದಿರುವುದಿಲ್ಲ ಎಂದು ಉತ್ತರ ಗೋವಾ ಕರಾವಳಿಯಲ್ಲಿ ನೈಟ್ ಕ್ಲಬ್‌ಗಳನ್ನೂ ನಡೆಸುತ್ತಿರುವ ಫೆರ್ನಾಂಡಿಸ್ ಅಭಿಪ್ರಾಯಪಟ್ಟಿದ್ದಾರೆ.
ಪೊಲೀಸ್ ಸಿಬ್ಬಂದಿಯನ್ನು ಬೈಕಿನ ಹಿಂಬದಿಯಲ್ಲಿ ಕುಳ್ಳಿರಿಸಿಕೊಂಡು ಡ್ರಗ್ಸ್ ಮಾರಾಟ ಮಾಡಲಾಗುತ್ತಿರುವ ಹಲವು ಉದಾಹರಣೆಗಳು ನನಗೆ ಗೊತ್ತಿವೆ ಎಂದೂ ಅವರು ಹೇಳಿದ್ದಾರೆ.
ಇತ್ತೀಚೆಷ್ಟೇ ಹೇಳಿಕೆ ನೀಡಿದ್ದ ಗೃಹಸಚಿವ ರವಿ ನಾಯ್ಕ್, ಗೋವಾದಲ್ಲಿ ಮಾದಕ ದ್ರವ್ಯ ಲಭ್ಯವಿಲ್ಲ ಎಂದಿದ್ದರು. ಆದರೆ ಇದಕ್ಕೆ ತದ್ವಿರುದ್ಧ ಹೇಳಿಕೆ ನೀಡಿರುವ ಅವರದೇ ಪಕ್ಷದ ಹಿರಿಯ ಮುಖಂಡ ಫೆರ್ನಾಂಡಿಸ್, ದಕ್ಷಿಣ ಗೋವಾಕ್ಕಿಂತ ಉತ್ತರ ಗೋವಾದಲ್ಲಿ ಹೆಚ್ಚಿನ ಡ್ರಗ್ಸ್ ಮಾರಾಟವಾಗುತ್ತಿದೆ ಎಂದಿದ್ದಾರೆ.
ದಕ್ಷಿಣ ಗೋವಾದಲ್ಲೂ ಮಾದಕ ದ್ರವ್ಯಗಳು ಲಭ್ಯವಿರಬಹುದು. ಆದರೆ ಉತ್ತರ ಗೋವಾದ ಕರಾವಳಿಯಷ್ಟಲ್ಲ. ಎಲ್ಲೆಲ್ಲಿ ಮಾದಕ ದ್ರವ್ಯಗಳು ಲಭ್ಯವಿದೆ ಮತ್ತು ಯಾರೆಲ್ಲ ಮಾರಾಟ ಮಾಡುತ್ತಿದ್ದಾರೆ ಎಂಬುದೂ ನನಗೆ ಗೊತ್ತು. ಅವರಲ್ಲಿ ಹೆಚ್ಚಿನವರು ವಿದೇಶೀಯರು ಎಂದು ಫೆರ್ನಾಂಡಿಸ್ ಆರೋಪಿಸಿದ್ದಾರೆ.
ಇಲ್ಲಿನ ಕಾಂಡೋಲಿಮ್ - ಕಾಲಂಗಟ್ ಪ್ರದೇಶದಲ್ಲಿ ನೈಜೀರಿಯಾದ ಗ್ಯಾಂಗ್‌ಗಳು ನಾರ್ಕೊಟಿಕ್ಸ್‌ಗಳನ್ನು ಮಾರಾಟ ಮಾಡುತ್ತಿದ್ದಾರೆ. ಒಜ್ರಾಂಟ್ ಬೀಚ್‌ನಲ್ಲಿ ಇಸ್ರೇಲಿಗಳು ಮಾರುತ್ತಿದ್ದಾರೆ. ಮೊರ್ಜಿಮ್ ಬೀಚಿನಲ್ಲಿ ರಷ್ಯನ್ನರು ಮಾರುತ್ತಿದ್ದರೆ, ಅಂಜುನಾದಲ್ಲಿ ಸ್ಥಳೀಯ ಗ್ಯಾಂಗ್‌ಗಳು ಮಾರುತ್ತಿವೆ. ಇಲ್ಲಿ ಪೊಲೀಸರು, ರಾಜಕಾರಣಿಗಳು ಮತ್ತು ಡ್ರಗ್ ಮಾಫಿಯಾ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಅವರು ಹೇಳಿದ್ದಾರೆ.