ಉಗ್ರರ ದಾಳಿ ಎದುರಿಸಲು ಸಿದ್ಧರಾಗಿ; ಕರ್ನಾಟಕಕ್ಕೆ ಕಟ್ಟೆಚ್ಚರ
ನವದೆಹಲಿ, ಮಂಗಳವಾರ, 12 ಜನವರಿ 2010( 19:49 IST )
ಮುಂಬರಲಿರುವ ಗಣರಾಜ್ಯೋತ್ಸವ ಹಿನ್ನೆಲೆಯಲ್ಲಿ ಸಂಭಾವ್ಯ ಭಯೋತ್ಪಾದಕ ದಾಳಿಗಳನ್ನು ವಿಫಲಗೊಳಿಸಲು ಸಿದ್ಧರಾಗಬೇಕು ಕರ್ನಾಟಕ ಸೇರಿದಂತೆ ಏಳು ರಾಜ್ಯಗಳಿಗೆ ಕೇಂದ್ರ ಸರಕಾರ ಸೂಚನೆ ನೀಡಿದೆ.
ಗಡಿ ಪ್ರದೇಶಗಳಲ್ಲಿ ಉಗ್ರಗಾಮಿಗಳು ಮತ್ತು ಅವರ ಜಾಲದ ಇತರ ಸದಸ್ಯರ ನಡುವೆ ನಡೆದಿರುವ ಸಂಭಾಷಣೆಗಳನ್ನು ಆಧರಿಸಿ ಈ ಕಟ್ಟೆಚ್ಚರವನ್ನು ರವಾನಿಸಲಾಗಿದ್ದು, ಇದರಲ್ಲಿ ಬೆಂಗಳೂರು ನಗರವನ್ನೂ ಸೇರಿಸಲಾಗಿದೆ.
ಮಹಾರಾಷ್ಟ್ರ, ಕರ್ನಾಟಕ ಮತ್ತು ದೆಹಲಿ ಸೇರಿದಂತೆ ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಲ, ಅಸ್ಸಾಂಗಳು ಯಾವುದೇ ಸಂಭಾವ್ಯ ಭಯೋತ್ಪಾದಕ ದಾಳಿಗಳನ್ನು ವಿಫಲಗೊಳಿಸಲು ಅಗತ್ಯವಿರುವ ಎಲ್ಲಾ ಪೂರ್ವತಯಾರಿಗಳನ್ನು ನಡೆಸುವಂತೆ ಕೇಂದ್ರ ಗೃಹ ಸಚಿವಾಲಯವು ತನ್ನ ಸಲಹೆ ನೀಡಿದೆ.
ಅಧಿಕೃತ ಮೂಲಗಳ ಪ್ರಕಾರ ಪೆಟ್ರೋಲಿಯಂ ಸ್ಥಾವರಗಳು ಸೇರಿದಂತೆ ಪ್ರಮುಖ ನಿರ್ದಿಷ್ಟ ಸ್ಥಳಗಳಲ್ಲಿ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಅನುಸರಿಸುವಂತೆ ರಾಜ್ಯ ಸರಕಾರಗಳಿಗೆ ಸೂಚನೆಗಳನ್ನು ನೀಡಲಾಗಿದೆ.
ಇತ್ತೀಚಿನ ದಿನಗಳಲ್ಲಿ ಗಡಿ ಪ್ರದೇಶದಾದ್ಯಂತ ಭಯೋತ್ಪಾದಕರು ಮತ್ತು ಅವರ ಬಳಗ ನಡೆಸಿರುವ ಸಂಭಾಷಣೆಯನ್ನು ಗುಪ್ತಚರ ಇಲಾಖೆ ದಾಖಲಿಸಿಕೊಂಡಿದ್ದು, ಅದರಂತೆ ರಾಜ್ಯ ಸರಕಾರಗಳಿಗೆ ಎಚ್ಚರಿಕೆ ರವಾನಿಸಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ಗಣರಾಜ್ಯೋತ್ಸವ ದಿನದಂದು ಅಧಿಕೃತ ಕಾರ್ಯಕ್ರಮಗಳು ನಡೆಯುವ ಸಂದರ್ಭದಲ್ಲಿ ಭಯೋತ್ಪಾದನಾ ದಾಳಿಗಳು ನಡೆಯುವ ಸಾಧ್ಯತೆಗಳಿರುವುದನ್ನು ಉಗ್ರರ ಸಂಭಾಷಣೆಗಳಿಂದ ತಿಳಿದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ಈ ಹಿನ್ನೆಲೆಯಲ್ಲಿ ಗಣರಾಜ್ಯೋತ್ಸವದ ಪ್ರಮುಖ ಕಾರ್ಯಕ್ರಮ ನಡೆಯುವ ರಾಜಧಾನಿ ದೆಹಲಿ ಸೇರಿದಂತೆ ಪ್ರಮುಖ ನಗರಗಳಾದ ಮುಂಬೈ, ಬೆಂಗಳೂರು ಮತ್ತು ಕೊಲ್ಕತ್ತಾಗಳ ಆಯಕಟ್ಟಿನ ಜಾಗಗಳಲ್ಲಿ ಹೆಚ್ಚುವರಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗುತ್ತಿದೆ.