ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಈ ಬಾಲಕಿ ಸುರಿಸುತ್ತಿರುವುದು ಬರೀ ಕಣ್ಣೀರಲ್ಲ, ರಕ್ತ ಕಣ್ಣೀರು..! (Twinkle Dwivedi | India | Cries Blood | Dr George Buchanan)
Bookmark and Share Feedback Print
 
ಇದು ವಿಚಿತ್ರವಾದರೂ ಸತ್ಯ. ತನ್ನ ಹರೆಯದ ಹುಡುಗಿಯರೆಲ್ಲ ಚಿಗರೆಗಳಂತೆ ಪುಟಿಯುತ್ತಿರುವ ಹೊತ್ತಿನಲ್ಲಿ ಆಕೆ ಕಣ್ಣೀರನ್ನು ಒರೆಸುತ್ತಿದ್ದಾಳೆ. ಅದು ಬರೀ ಕಣ್ಣೀರಾದರೆ ಸುದ್ದಿಯಾಗುತ್ತಿರಲಿಲ್ಲ, ಆಕೆಯದ್ದು ರಕ್ತ ಕಣ್ಣೀರು!

ಉತ್ತರ ಪ್ರದೇಶದ ಲಕನೇರ್ ಎಂಬಲ್ಲಿನ 13ರ ಹರೆಯದ ಈ ಬಾಲಕಿಯ ಹೆಸರು ಟ್ವಿಂಕಲ್ ದ್ವಿವೇದಿ. ಕಣ್ಣು, ತಲೆ, ಕೈಗಳು, ಪಾದ, ಎದೆ, ಮೂಗು ಹೀಗೆ ದೇಹದ ಎಲ್ಲೆಡೆಗಳಿಂದ ರಕ್ತವನ್ನೇ ಸುರಿಸುತ್ತಿರುವ ಆಕೆಯದ್ದು ವರ್ಣಿಸಿ ಮುಗಿಸಲಾಗದ ಯಾತನೆ. ಯಾವ ವೈದ್ಯರಿಗೂ ಇದುವರೆಗೆ ಅದಕ್ಕೊಂದು ನಿರ್ದಿಷ್ಟ ಪರಿಹಾರವನ್ನು ನೀಡಲು ಸಾಧ್ಯವಾಗಿಲ್ಲ.

ಇದನ್ನು ನಂಬಲಾಗುತ್ತಿಲ್ಲ ಎಂದು ವೈದ್ಯರೂ ಕೈ ತೊಳೆದುಕೊಳ್ಳುತ್ತಾರೆಯೇ ಹೊರತು, ಗಾಯ ಮಾಡದೆ ಅಥವಾ ಕನಿಷ್ಠ ಪರಚಿಕೊಳ್ಳದೆಯೂ ಚರ್ಮದಿಂದ ರಕ್ತ ಸುರಿಯುತ್ತಿರುವ ಹಿಂದಿನ ನಿಗೂಢತೆಯನ್ನು ಭೇದಿಸಲು ಅವರಿಗೂ ಸಾಧ್ಯವಾಗಿಲ್ಲ.

ನೋವಾಗೋದಿಲ್ಲ...
ನನ್ನ ಕಣ್ಣುಗಳು, ಕೈಗಳು, ತಲೆ, ಕಿವಿ ಹೀಗೆ ಎಲ್ಲಾ ಕಡೆಗಳಿಂದಲೂ ರಕ್ತ ಸುರಿಯುತ್ತದೆ. ರಕ್ತ ಸುರಿಯಲು ಆರಂಭಿಸಿದಾಗ ಯಾವುದೇ ರೀತಿಯಲ್ಲೂ ನೋವಾಗೋದಿಲ್ಲ, ಆದರೆ ದಣಿವಾಗುತ್ತದೆ. ಕೆಲವು ಬಾರಿ ತಲೆನೋವು ಕೂಡ ಬರುತ್ತದೆ ಎನ್ನುತ್ತಾಳೆ ಬಾಲೆ ಟ್ವಿಂಕಲ್.
ವಿದೇಶಿ ಪತ್ರಿಕೆಗಳು ಪ್ರಕಟಿಸಿರುವ ವರದಿಗಳು...
PR


ಇದು ಸ್ವಯಂಕೃತ ಕೃತ್ಯ ಎಂಬುವವರಿಗೆ ಉತ್ತರಿಸುವ ಆಕೆ, ತಾನಿದನ್ನು ಉದ್ದೇಶ ಪೂರ್ವಕವಾಗಿ ಮಾಡುತ್ತಿಲ್ಲ. ನನ್ನ ರಕ್ತವನ್ನು ನಾನೇ ಯಾಕೆ ಈ ರೀತಿ ಮಾಡುವ ಅಗತ್ಯವಿದೆ. ಇದು ನನ್ನ ಇಚ್ಛೆಯಲ್ಲ. ನನಗೂ ಶಾಲೆಗೆ ಹೋಗಬೇಕು, ನಿಮ್ಮಂತೆ ಸಾಮಾನ್ಯ ಜೀವನ ನಡೆಸಬೇಕೆಂಬ ಆಸೆಯಿದೆ ಎನ್ನುತ್ತಾಳೆ.

ಅನಾಮತ್ತಾಗಿ ರಕ್ತ ಸೋರುತ್ತಿರುವ ಕಾರಣ ಆಕೆಯನ್ನು ಕಳೆದೆರಡು ವರ್ಷಗಳಲ್ಲಿ ಎರಡು ಶಾಲೆಗಳು ಹೊರಗೆ ಹಾಕಿವೆ. ಯಾವ ಶಾಲೆಯಲ್ಲೂ ಆಕೆಯನ್ನು ಸೇರಿಸಿಕೊಳ್ಳಲು ಒಪ್ಪಿಗೆ ಸಿಗುತ್ತಿಲ್ಲ.

ನಾನು ಶಾಲೆಯಲ್ಲಿರುವಾಗ ನನ್ನ ಬಟ್ಟೆಯೆಲ್ಲಾ ರಕ್ತದಿಂದ ತೊಯ್ದು ಕೆಂಪಾಗುತ್ತಿತ್ತು. ಆಗ ಯಾರೂ ನನ್ನನ್ನು ಹತ್ತಿರಕ್ಕೆ ಸೇರಿಸುತ್ತಿರಲಿಲ್ಲ. ಆಗೆಲ್ಲಾ ನಾನು ಒಬ್ಬಳೇ ಕೂತು ಅಳುತ್ತಿದ್ದೆ ಎಂದು ವಿವರಣೆ ನೀಡುತ್ತಾಳೆ.

ಆಕೆಗೆ ಭೂತ ಹಿಡಿದಿದೆ...
ಕಳೆದ ಮೂರು ವರ್ಷಗಳಿಂದ ಈ ರೀತಿ 50ಕ್ಕೂ ಹೆಚ್ಚು ಬಾರಿ ರಕ್ತ ಸೋರಿಕೆಗೊಳಗಾಗಿರುವ ಬಾಲಕಿಯನ್ನು ಹಂಗಿಸುವವರಿಗೂ ಕಡಿಮೆಯಿಲ್ಲ. ಆಕೆಯನ್ನು ಕೆಲವರು ಪಿಶಾಚಿ, ಇನ್ನು ಕೆಲವರು ದೈವತ್ವಕ್ಕೂ ಏರಿಸಿದ್ದಾರೆ.

ಜನ ನನ್ನ ಬಗ್ಗೆ ಆ ರೀತಿ ಮಾತನಾಡಿಕೊಂಡಾಗ ತುಂಬಾ ದುಃಖವಾಗುತ್ತದೆ ಎಂದು ಟ್ವಿಂಕಲ್ ಹೇಳುತ್ತಾಳೆ.

ಸ್ಥಳೀಯ ಮಂತ್ರವಾದಿಗಳ ಪ್ರಕಾರ ಆಕೆಗೆ ರಕ್ತ ಕುಡಿಯುವ ಪಿಶಾಚಿ ಬಡಿದಿದೆ. ಆ ಕಾರಣಕ್ಕಾಗಿ ಟ್ವಿಂಕಲ್ ಮೈಯಿಂದ ರಕ್ತವನ್ನು ಅದು ಕುಡಿಯುತ್ತಿದೆ ಎನ್ನುತ್ತಾರೆ.

ವಿದೇಶಗಳಲ್ಲೂ ಭಾರೀ ಸುದ್ದಿ...
ಈ ಸುದ್ದಿ ಬ್ರಿಟನ್ ಮತ್ತು ಅಮೆರಿಕಾಗಳಲ್ಲಿ ಉಚಿತ ಮನರಂಜನೆಯಾಗಿ ಮಾರ್ಪಟ್ಟಿದೆ. ಕೆಲವು ಟೀವಿ ಚಾನೆಲ್‌ಗಳು ಇದನ್ನು ಚಿತ್ರೀಕರಿಸಿ ತಮ್ಮ ರಿಯಾಲಿಟಿ ಶೋಗಳಲ್ಲೂ ತೋರಿಸಿ ತಮ್ಮ ವೀಕ್ಷಕರನ್ನು ಹೆಚ್ಚಿಸಿಕೊಂಡಿವೆ.

ಕೆಲವು ವಿಶ್ಲೇಷಕರು ಇದನ್ನು ಸುಳ್ಳೆಂದು, ಬಾಲಕಿ ಉದ್ದೇಶಪೂರ್ವಕವಾಗಿ ನಾಟಕ ಮಾಡುತ್ತಿದ್ದಾಳೆಂದು ವಿಶ್ಲೇಷಣೆಗಳನ್ನೂ ನಡೆಸಿದ್ದಾರೆ. ಕೆಲವರಂತೂ ಸಖೇದಾಶ್ಚರ್ಯಪಟ್ಟಿದ್ದಾರೆ.

ಭಾರತಕ್ಕೆ ಬಂದ ವೈದ್ಯರು...
ಸುದ್ದಿ ತಿಳಿದ ಬ್ರಿಟನ್‌ನ ವೈದ್ಯ ಜಾರ್ಜ್ ಬುಚನಾನ್ ಎಂಬವರು ಭಾರತಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ಆದರೆ ಅವರಿಗೂ ಯಾವುದೇ ಪರಿಹಾರ ಒದಗಿಸಲು ಸಾಧ್ಯವಾಗದೆ, ನಿಗೂಢ ಎಂದಷ್ಟೇ ಹೇಳಿದ್ದಾರೆ.

ಮುಂಬೈಯ ಜಾಸ್ಲಾಕ್ ಆಸ್ಪತ್ರೆಯಲ್ಲಿ ಟ್ವಿಂಕಲ್‌ಳನ್ನು ಭೇಟಿ ಮಾಡಿದ ಬುಚನಾನ್, ನಾನು ಈ ಹಿಂದೆ ಇಂತಹ ಪ್ರಕರಣವನ್ನು ನೋಡೇ ಇಲ್ಲ. ವೈದ್ಯಕೀಯ ಇತಿಹಾಸದಲ್ಲೂ ಓದಿಲ್ಲ. ಆಕೆಗೆ ಸಹಾಯ ಮಾಡಲು ಸಾಧ್ಯವಾಗುತ್ತದೆಯೋ ಎಂದು ಯತ್ನಿಸುತ್ತಿದ್ದೇನೆ ಎಂದಿದ್ದಾರೆ.

ಆಕೆಯ ದೇಹದಲ್ಲಿ ಎಲ್ಲೂ ಗಾಯವಾಗಿಲ್ಲ. ಆಕೆ ಸ್ವತಃ ಗಾಯ ಮಾಡಿಕೊಳ್ಳದೆ, ಅನುದ್ದೇಶಪೂರ್ವಕವಾಗಿ ರಕ್ತ ಒಸರುತ್ತಿದೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಟ್ವಿಂಕಲ್ ತಾಯಿ ನಂದಿನಿ ಮತ್ತು ತಂದೆ ಆದಿತ್ಯ ಕುಮಾರ್ ಭಾರತದಲ್ಲಿ ಪರಿಹಾರ ಕಾಣದೇ ಇದ್ದಾಗ ವಿದೇಶಿ ವೈದ್ಯರನ್ನು ಸಂಪರ್ಕಿಸಿದ್ದರು.
ಸಂಬಂಧಿತ ಮಾಹಿತಿ ಹುಡುಕಿ