2008ರ ಮುಂಬೈ ಹತ್ಯಾಕಾಂಡ ಹಿಂದಿರುವ ಭಯೋತ್ಪಾದಕರ ವಿರುದ್ಧ ತ್ವರಿತ ಕ್ರಮ ಕೈಗೊಳ್ಳುವಂತೆ ಪಾಕಿಸ್ತಾನವನ್ನು ಒತ್ತಾಯಿಸಿರುವ ಭಾರತ, ಗಡಿ ಪ್ರದೇಶದಲ್ಲಿ ನಡೆಯುತ್ತಿರುವ ಅತಿಕ್ರಮಣ ಯತ್ನವನ್ನೂ ಹತ್ತಿಕ್ಕಬೇಕು ಎಂದು ಆಗ್ರಹಿಸಿದೆ.
ಇಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಷಿಯವರೊಂದಿಗೆ ದೂರವಾಣಿ ಮಾತುಕತೆ ನಡೆಸಿದ ಭಾರತದ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ, 26/11 ಮುಂಬೈ ಭಯೋತ್ಪಾದನಾ ದಾಳಿಯ ಹಿಂದಿನ ಪಿತೂರಿದಾರರ ವಿಚಾರಣೆಯನ್ನು ತ್ವರಿತಗೊಳಿಸುವಂತೆ ಮನವಿ ಮಾಡಿಕೊಂಡರು.
166 ಭಾರತೀಯರು ಮತ್ತು ವಿದೇಶೀಯರ ಸಾವಿಗೆ ಕಾರಣವಾಗಿದ್ದ ದಾಳಿಯ ಹಿಂದಿನ ಆರೋಪಿಗಳ ವಿರುದ್ಧ ಕೈಗೊಳ್ಳಲಾದ ಕ್ರಮಗಳು ಮತ್ತು ವಿಚಾರಣೆಯ ಕುರಿತು ಈ ಸಂದರ್ಭದಲ್ಲಿ ಕೃಷ್ಣ ಮತ್ತು ಖುರೇಷಿ ಹಂಚಿಕೊಂಡರು.
ಹೊಸ ವರ್ಷದ ಶುಭಾಶಯಗಳೊಂದಿಗೆ ಮಾತು ಆರಂಭಿಸಿದ ಕೃಷ್ಣ, ದಾಳಿಯ ಹಿಂದಿನ ರೂವಾರಿಗಳನ್ನು ಶೀಘ್ರವೇ ನ್ಯಾಯದ ಕಟಕಟೆಗೆ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದು, ಭಾರತಕ್ಕೆ ಆಗಾಗ ಮಾಹಿತಿ ರವಾನಿಸುವಂತೆ ಹೇಳಿದ್ದಾರೆಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.
ಇದೇ ಸಂದರ್ಭದಲ್ಲಿ ಗಡಿ ಪ್ರದೇಶದಾದ್ಯಂತದ ಉಗ್ರಗಾಮಿ ಚಟುವಟಿಕೆಗಳ ಕುರಿತ ಭಾರತದ ಕಳವಳವನ್ನು ಪಾಕಿಸ್ತಾನದೊಂದಿಗೆ ಹಂಚಿಕೊಂಡಿರುವ ಸಚಿವರು, ಪ್ರಸಕ್ತ ಹೊಂದಿರುವ ಭಯೋತ್ಪಾದಕರ ಮೂಲ ನೆಲೆಗಳಿಂದ ಭಾರತ ವಿರೋಧಿ ಕಾರ್ಯಾಚರಣೆಗಳು ನಡೆಯುತ್ತಿದ್ದು, ಇದನ್ನು ನಾಶ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಪಾಕಿಸ್ತಾನ ಇತ್ತೀಚೆಗಷ್ಟೇ 100 ಮಂದಿ ಭಾರತೀಯ ಮೀನುಗಾರರನ್ನು ಬಿಡುಗಡೆ ಮಾಡಿರುವುದಕ್ಕೆ ಇದೇ ಸಂದರ್ಭದಲ್ಲಿ ಕೃತಜ್ಞತೆ ಅರ್ಪಿಸಿದ ಸಚಿವರು, ಪಾಕಿಸ್ತಾನದ ವಶದಲ್ಲಿರುವ 500ಕ್ಕೂ ಹೆಚ್ಚು ಮೀನುಗಾರರು ಹಾಗೂ 400ರಷ್ಟು ಮೀನುಗಾರಿಕಾ ದೋಣಿಗಳನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.