ಲೋಕಸಭಾ ಚುನಾವಣೆಯಲ್ಲಿ ವಿರೋಧಿಗಳ ಗುಂಪು ಒಂದಾಗಿದ್ದರಿಂದ ದಲಿತೆ ದೇಶದ ಪ್ರಧಾನಿಯಾಗಲು ಸಾಧ್ಯವಾಗಲಿಲ್ಲ ಎಂದು ಇಂದು 54ನೇ ವರ್ಷಕ್ಕೆ ಕಾಲಿಟ್ಟ ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ತನ್ನ ಹೊಸ ಪುಸ್ತಕವೊಂದರಲ್ಲಿ ಹೇಳಿದ್ದಾರೆ.
ಇದೇ ಕಾರಣಕ್ಕಾಗಿ ಭಾರತ-ಅಮೆರಿಕಾ ಪರಮಾಣು ಒಪ್ಪಂದ ಸಂದರ್ಭದಲ್ಲಿ ಕೇಂದ್ರ ಸರಕಾರ ವಿಶ್ವಾಸ ಮತ ಯಾಚಿಸುವಾಗ ಈ ಪಕ್ಷಗಳೆಲ್ಲಾ ಗುಪ್ತ ಒಳಒಪ್ಪಂದ ಮಾಡಿಕೊಂಡಿದ್ದವು. ಆ ಮೂಲಕ ನಾನು ಪ್ರಧಾನಿಯಾಗುವುದನ್ನು ತಡೆಯಲಾಯಿತು ಎಂದು ತನ್ನ ಹುಟ್ಟುಹಬ್ಬದಂದು ಬಿಡುಗಡೆ ಮಾಡಿದ 'ನನ್ನ ಪ್ರಯಾಸಭರಿತ ಜೀವನದ ಪ್ರವಾಸ ಕಥನ ಮತ್ತು ಬಿಎಸ್ಪಿ ಚಳವಳಿ' ಎಂಬ ಪುಸ್ತಕದ ಐದನೇ ಭಾಗದಲ್ಲಿ ಅವರು ಬರೆದುಕೊಂಡಿದ್ದಾರೆ.
PTI
ಈಗಲೂ ವಂಶ ಪಾರಂಪರ್ಯ ಮತ್ತು ಸ್ವಜನ ಪಕ್ಷಪಾತದ ಆಡಳಿತ ಚಾಲ್ತಿಯಲ್ಲಿರುವುದು ದೇಶದ ದೌರ್ಭಾಗ್ಯ ಎಂದು ಪರೋಕ್ಷವಾಗಿ ನೆಹರು ಕುಟುಂಬವನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ಇದರಿಂದಾಗಿ ಕೇವಲ ದುರಾಕ್ರಮಣದ ವೈಖರಿಗೆ ಪ್ರೋತ್ಸಾಹ ನೀಡಿದಂತಾಗಿರುವುದು ಮಾತ್ರವಲ್ಲ; ಭಿನ್ನ ರಾಜಕೀಯ ಪಕ್ಷಗಳಿಂದ ದಲಿತ ಪುತ್ರಿಯ ವಿರುದ್ಧ ಅನೈತಿಕ ಮೈತ್ರಿಗಳೂ ಉಂಟಾದವು. ಇದೆಲ್ಲದರ ಉದ್ದೇಶವೂ ನಾನು ಪ್ರಧಾನ ಮಂತ್ರಿಯಾಗುವ ಸಾರ್ವಜನಿಕರ ಬಯಕೆಯನ್ನು ತುಳಿದು ಹಾಕುವುದಾಗಿತ್ತು ಎಂದು ಮಾಯಾವತಿ ಬರೆದಿದ್ದಾರೆ.
ತನ್ನದೇ ಸ್ಮಾರಕಗಳನ್ನು ಮತ್ತು ಉದ್ಯಾನವನಗಳನ್ನು ರಾಜ್ಯದಲ್ಲಿ ನಿರ್ಮಿಸುವ ಬಗ್ಗೆ ಲೇಖನಿ ಹರಿಸಿರುವ ಅವರು, ನಾವು ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ಮತ್ತು ಅವರ ನೀತಿಯಂತೆ ದ್ವೇಷ ಸಾಧಿಸುವವರಲ್ಲ ಎಂದಿದ್ದಾರೆ.
ಸುಮಾರು 1,100 ಪುಟಗಳನ್ನೊಳಗೊಂಡಿರುವ ಹಿಂದಿ ಮತ್ತು ಇಂಗ್ಲೀಷ್ ಆವೃತ್ತಿಗಳಲ್ಲಿ ಏಕಕಾಲದಲ್ಲಿ ಬಿಡುಗಡೆಗೊಂಡ ಪುಸ್ತಕಗಳಲ್ಲಿ ತನ್ನ ಹುಟ್ಟು ಹಬ್ಬದ ಬಗ್ಗೆ ಕೂಡ ಬರೆದಿದ್ದು, ತನ್ನ ಹುಟ್ಟುಹಬ್ಬಗಳು ಬಿಎಸ್ಪಿ ಚಳವಳಿಗಳಿಗೆ ಕೊಡುಗೆಗಳು; ಇದನ್ನು ಯಾವತ್ತೂ ಸಮಾಜದ ಬಡವರು ಮತ್ತು ದುರ್ಬಲರನ್ನು ವಿರೋಧಿಸುವ ವಿರೋಧ ಪಕ್ಷಗಳು ಮತ್ತು ಬಂಡವಾಳಿಗರ ಬೆಂಬಲಿಗರಿಗೆ ಸಂಬಂಧ ಕಲ್ಪಿಸಲಾಗದು ಎಂದು ಹೇಳಿದ್ದಾರೆ.