ವಿಶ್ವದ ಅತೀ ಹೆಚ್ಚು ನಿರಾಶ್ರಿತ ಮಕ್ಕಳನ್ನು ಹೊಂದಿರುವ ಭಾರತದಲ್ಲಿ ದೇವರ ಮಕ್ಕಳೆಂದೇ ಹೇಳಲಾಗುವ ಬೀದಿ ಮಕ್ಕಳಿಗೆ ಭಾರೀ ಮಟ್ಟದಲ್ಲಿ ಲೈಂಗಿಕ ಕಿರುಕುಳ ನೀಡಲಾಗುತ್ತಿದೆ ಎಂದು ಅಂಕಿ-ಅಂಶಗಳು ಬಹಿರಂಗಪಡಿಸಿವೆ.
ಶೇ.66.8ರಷ್ಟು ಬೀದಿ ಮಕ್ಕಳಿಗೆ ದೈಹಿಕ ಕಿರುಕುಳ ನೀಡಲಾಗುತ್ತಿದೆ ಎಂಬುದನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವು ನಡೆಸಿರುವ ಈ ಸಮೀಕ್ಷೆ ಕಂಡುಕೊಂಡಿದೆ. ಆದರೆ ಯಾರು ಕಿರುಕುಳ ನೀಡುತ್ತಾರೆ ಹಾಗೂ ಇದರಲ್ಲಿ ಗಂಡು ಮತ್ತು ಹೆಣ್ಣು ಮಕ್ಕಳ ಸಂಖ್ಯೆಯೆಷ್ಟು ಎಂಬುದನ್ನು ವಿವರಿಸಲಾಗಿಲ್ಲ.
ಲೈಂಗಿಕ ಕಿರುಕುಳಕ್ಕೊಳಗಾಗುವ ಬಹುತೇಕ ಬೀದಿ ಮಕ್ಕಳ ವಯಸ್ಸು ಸುಮಾರು ಐದರಿಂದ 12. ಇತರೆ ವಯಸ್ಸಿನ ಮಕ್ಕಳು ಇಂತಹ ದೌರ್ಜನ್ಯಕ್ಕೊಳಗಾಗುವ ಸಂಖ್ಯೆ ಕಡಿಮೆ. ಆದರೆ ಒಟ್ಟಾರೆ ಬೀದಿ ಮಕ್ಕಳಲ್ಲಿ ಶೇ.55ರಷ್ಟು ಮಂದಿಗೆ ಲೈಂಗಿಕ ಹಿಂಸೆ ನೀಡಲಾಗುತ್ತಿದೆ.
ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ದೆಹಲಿ, ಗೋವಾ, ಗುಜರಾತ್, ಕೇರಳ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಿಜೋರಾಂ, ರಾಜಸ್ತಾನ್, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಲ ಸೇರಿದಂತೆ ಒಟ್ಟು 13 ರಾಜ್ಯಗಳ ಸುಮಾರು 12,447 ಮಕ್ಕಳನ್ನು ಈ ಸಮೀಕ್ಷೆಗೊಳಪಡಿಸಲಾಗಿದೆ.
ಈ ಅಧ್ಯಯನಕ್ಕೆ ಕೌಟುಂಬಿಕ ವಾತಾವರಣದಲ್ಲಿರುವ, ಶಾಲೆಗೆ ಹೋಗುತ್ತಿರುವ, ಶಾಲೆಗಳ ಪಾಲನೆಯಲ್ಲಿರುವ ಮತ್ತು ಯಾವುದೂ ಇಲ್ಲದೆ ಬೀದಿಯಲ್ಲಿರುವ ಮಕ್ಕಳನ್ನು ಬಳಸಿಕೊಳ್ಳಲಾಗಿದೆ. ಒಟ್ಟು ಸಂಖ್ಯೆಯ ಶೇ.18.6ರಷ್ಟು (2,317) ಮಕ್ಕಳು ನಿರಾಶ್ರಿತರು.
ಅಂತಾರಾಷ್ಟ್ರೀಯ ಸಂಸ್ಥೆಗಳು ಕೈಗೊಂಡಿರುವ ಸಮೀಕ್ಷೆಗಳ ಪ್ರಕಾರ ಭಾರತದಲ್ಲಿ ಸುಮಾರು 1.8 ಕೋಟಿ ನಿರಾಶ್ರಿತ ಮಕ್ಕಳಿದ್ದು, ಇದು ಜಗತ್ತಿನಲ್ಲೇ ಅತೀ ಹೆಚ್ಚಿನ ಸಂಖ್ಯೆ.
ಇಂತಹ ಮಕ್ಕಳಿಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಇತ್ತೀಚೆಗಷ್ಟೇ 'ಮಕ್ಕಳ ಸಂರಕ್ಷಣಾ ಯೋಜನೆ' ಎಂದು ಕೇಂದ್ರ ಪ್ರಾಯೋಜಕತ್ವದ ಕಾರ್ಯಕ್ರಮವನ್ನು ಪ್ರಕಟಿಸಿತ್ತು.