ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ರಿಯಾಂಕಾ ಗಾಂಧಿ ಕ್ಯಾಲೆಂಡರ್; ರಾಜಕೀಯಕ್ಕೆ ಮುನ್ನುಡಿಯೇ?
(Priyanka Gandhi | New Year calendar | Uttar Pradesh | Congress)
ಪ್ರಿಯಾಂಕಾ ಗಾಂಧಿ ಕ್ಯಾಲೆಂಡರ್; ರಾಜಕೀಯಕ್ಕೆ ಮುನ್ನುಡಿಯೇ?
ನವದೆಹಲಿ, ಶನಿವಾರ, 16 ಜನವರಿ 2010( 15:12 IST )
ರಾಜಕೀಯಕ್ಕೆ ಬರುವುದಿಲ್ಲ ಎಂದು ಕಳೆದ ಹಲವು ವರ್ಷಗಳಿಂದ ಹೇಳುತ್ತಾ ಚುನಾವಣಾ ಪ್ರಚಾರಗಳಲ್ಲಿ ತೊಡಗಿಸಿಕೊಳ್ಳುತ್ರಿರುವ ಪ್ರಿಯಾಂಕಾ ಗಾಂಧಿ ವಾದ್ರಾ ಅಧಿಕೃತವಾಗಿ ರಾಜಕಾರಣಕ್ಕೆ ಪದಾರ್ಪಣೆ ಮಾಡಲಿದ್ದಾರೆಯೇ?
ಕಾಂಗ್ರೆಸ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆಯಾದರೂ, ಸೀರೆಯುಟ್ಟ ನೆಹರು ಕುಟುಂಬದ ಕುಡಿ ವಿವಿಧ ಭಂಗಿಗಳಲ್ಲಿ ಉತ್ತರ ಪ್ರದೇಶದ ಮತದಾರರ ಜತೆ ಬೆರೆತಿರುವ ಚಿತ್ರಗಳುಳ್ಳ ಹೊಸ ವರ್ಷದ ಕ್ಯಾಲೆಂಡರ್ ಪ್ರಕಟಿಸಲಾಗಿರುವುದು ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
PR
ಗಾಂಧಿ ಕುಟುಂಬದ ಮತ್ತೊಂದು ಕುಡಿ ರಾಜಕೀಯಕ್ಕೆ ಧುಮುಕುವುದನ್ನು ಕಾಂಗ್ರೆಸ್ಸಿಗರು ಎದುರು ನೋಡುತ್ತಿರುವಂತೆಯೇ ಕಾಂಗ್ರೆಸ್‌ನ ವೆಬ್‌ಸೈಟ್ (pressbrief.in) ಇಂತಹ ಚಿತ್ರಗಳುಳ್ಳ ಕ್ಯಾಲೆಂಡರ್ ಪ್ರಕಟಿಸಿದೆ. ಈ ವೆಬ್‌ಸೈಟ್‌ನಲ್ಲಿ ಗಾಂಧಿ ಕುಟುಂಬದ ಸಂಪೂರ್ಣ ವಿವರಗಳೂ ಲಭ್ಯವಿದೆ.
2010ರ ವರ್ಷದ ಈ ನೂತನ ಕ್ಯಾಲೆಂಡರನ್ನು ಜನವರಿ 12ರಂದು ಪ್ರಿಯಾಂಕಾ ಹುಟ್ಟುಹಬ್ಬದಂದು ವೆಬ್‌ಸೈಟಿನಲ್ಲಿ ಹಾಕಲಾಗಿದೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ. ಇಲ್ಲಿ ಪ್ರಕಟಿಸಲಾಗಿರುವ ಕ್ಯಾಲೆಂಡರಿನ ಚಿತ್ರಗಳು ಪ್ರಿಯಾಂಕಾ ಅವರು ರಾಯ್ ಭರೇಲಿ ಮತ್ತು ಅಮೇಠಿಗಳಲ್ಲಿ ಮತದಾರರ ಜತೆಗಿದ್ದವುಗಳು.
ಕ್ಯಾಲೆಂಡರನ್ನು ಬಿಡುಗಡೆಗೊಳಿಸಿರುವುದನ್ನು ನೋಡಿದರೆ ಆಕೆ ಇನ್ನು ಕೆಲವೇ ತಿಂಗಳುಗಳಲ್ಲಿ ರಾಜಕೀಯಕ್ಕೆ ಧುಮುಕಲಿದ್ದಾರೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರಾದರೂ, ಸ್ವತಃ ಪ್ರಿಯಾಂಕಾ ನಿರ್ಧಾರಕ್ಕೆ ನಾವದನ್ನು ಬಿಟ್ಟಿದ್ದೇವೆ ಎಂದು ಕಾಂಗ್ರೆಸ್ ಪ್ರತಿಕ್ರಿಯಿಸಿದೆ.
ನಾವು ಕಾಲದಿಂದ ಕಾಲಕ್ಕೆ ರಾಜಕೀಯಕ್ಕೆ ಸೇರುವಂತೆ ಆಕೆಗೆ ಮನವಿ ಮಾಡುತ್ತಲೇ ಬಂದಿದ್ದೇವೆ. ಆದರೆ ಅವರಿನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ. ಅದು ಅವರ ವೈಯಕ್ತಿಕ ತೀರ್ಮಾನಕ್ಕೆ ಬಿಟ್ಟ ವಿಚಾರ ಎಂದು ಕಾಂಗ್ರೆಸ್ ವಕ್ತಾರ ಮನೀಷ್ ತಿವಾರಿ ಕ್ಯಾಲೆಂಡರ್ ಬಗೆಗಿನ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದಾರೆ.
ಈ ವೆಬ್‌ಸೈಟನ್ನು 2007ರ ಉತ್ತರ ಪ್ರದೇಶ ವಿಧಾನಸಭಾ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಆರಂಭಿಸಲಾಗಿತ್ತು. ರಾಹುಲ್ ಗಾಂಧಿ ಪ್ರಚಾರ ನಡೆಸುತ್ತಿದ್ದ ಮಾಹಿತಿಗಳು, ವೀಡಿಯೋಗಳು ಮತ್ತು ಫೋಟೋಗಳನ್ನು ಇದರಲ್ಲಿ ಪ್ರಕಟಿಸಲಾಗುತ್ತಿತ್ತು.
ಅಂದ ಹಾಗೆ ಇಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯವರ ಕ್ಯಾಲೆಂಡರುಗಳೂ ಈ ವೆಬ್‌ಸೈಟಿನಲ್ಲಿ ಲಭ್ಯ. ಯಾರು ಬೇಕಾದರೂ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.