ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ. ನಾರಾಯಣನ್‌ರನ್ನು ಪಶ್ಚಿಮ ಬಂಗಾಲಕ್ಕೆ ಹಾಗೂ ಮಾಜಿ ಗೃಹ ಸಚಿವ ಶಿವರಾಜ್ ಪಾಟೀಲ್ ಅವರನ್ನು ಪಂಜಾಬ್‌ಗೆ ರಾಜ್ಯಪಾಲರನ್ನಾಗಿ ನೇಮಿಸುವುದೂ ಸೇರಿದಂತೆ ಒಟ್ಟು ಐವರು ನೂತನ ರಾಜ್ಯಪಾಲರುಗಳ ಪಟ್ಟಿಯನ್ನು ಕೇಂದ್ರ ಸರಕಾರ ಅಂತಿಮಗೊಳಿಸಿದೆ.
ಮಾಜಿ ರಕ್ಷಣಾ ಕಾರ್ಯದರ್ಶಿ ಶೇಖರ್ ದತ್ ಅವರನ್ನು ಛತ್ತೀಸಗಢಕ್ಕೆ ಮತ್ತು ಛತ್ತೀಸಗಢ ರಾಜ್ಯಪಾಲರಾಗಿರುವ ಇ.ಎಸ್.ಎಲ್ ನರಸಿಂಹನ್ ಅವರನ್ನು ಆಂಧ್ರಪ್ರದೇಶದ ರಾಜಭವನಕ್ಕೆ ಕಳುಹಿಸಲು ನಿರ್ಧರಿಸಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ.
ಜಾರ್ಖಂಡ್ ರಾಜ್ಯಪಾಲ ಕೆ. ಶಂಕರನಾರಾಯಣ್ ಅವರನ್ನು ಮಹಾರಾಷ್ಟ್ರಕ್ಕೆ ವರ್ಗಾಯಿಸಿ, ಅಲ್ಲಿಗೆ ಕಾಂಗ್ರೆಸ್ ಹಿರಿಯ ನಾಯಕ ಮೋಹ್ಸಿನಾ ಕಿದ್ವಾಯಿಯವರನ್ನು ನೂತನ ರಾಜ್ಯಪಾಲರಾಗಿ ನೇಮಿಸಲಾಗುತ್ತದೆ.
ಹಿಮಾಚಲ ಪ್ರದೇಶ ರಾಜ್ಯಪಾಲ ಪ್ರಭು ರಾವು ಅವರನ್ನು ರಾಜಸ್ಥಾನಕ್ಕೆ, ಗುಜರಾತ್ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಉರ್ಮಿಲಬೆನ್ ಪಟೇಲ್ ಅವರನ್ನು ಹಿಮಾಚಲ ಪ್ರದೇಶಕ್ಕೆ ರಾಜ್ಯಪಾಲರನ್ನಾಗಿ ಆಯ್ಕೆಗೊಳಿಸುವ ತೀರ್ಮಾನಕ್ಕೆ ಬರಲಾಗಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರ ನಡುವೆ ಶುಕ್ರವಾರ ನಡೆದ ಸಭೆಯ ಬಳಿಕ ರಾಜ್ಯಪಾಲರುಗಳ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಇದನ್ನು ಗೃಹ ಸಚಿವಾಲಯದಿಂದ ರಾಷ್ಟ್ರಪತಿ ಭವನಕ್ಕೆ ರವಾನಿಸಲಾಗುತ್ತದೆ.
75ರ ಹರೆಯದ ಗುಪ್ತಚರ ವಿಭಾಗದ ಮಾಜಿ ಮುಖ್ಯಸ್ಥ ನಾರಾಯಣನ್ ಅವರಿಂದ ತೆರವಾಗುವ ರಾಷ್ಟ್ರೀಯ ಭದ್ರತಾ ಸಲಹೆಗಾರ ಸ್ಥಾನಕ್ಕೆ ಮಾಜಿ ವಿದೇಶಾಂಗ ಕಾರ್ಯದರ್ಶಿ ಶ್ಯಾಮ್ ಶರಣ್ ಮತ್ತು ಶಿವಶಂಕರ್ ಮೆನನ್ ಪೈಪೋಟಿ ನಡೆಸುತ್ತಿದ್ದಾರೆ.