ಮೂವರು ಭಯೋತ್ಪಾದಕರಿಗೆ ಆಶ್ರಯ ನೀಡಿದ್ದ ಮತ್ತು ಉಗ್ರಗಾಮಿ ಸಂಘಟನೆ ಲಷ್ಕರ್ ಇ ತೋಯ್ಬಾ ಜತೆ ಸಂಬಂಧ ಹೊಂದಿದ್ದ ಆರೋಪದ ಮೇಲೆ ನಾಲ್ಕು ವರ್ಷಗಳ ಹಿಂದೆ ಬಂಧನಕ್ಕೊಳಗಾಗಿದ್ದ ಹಜ್ ಹೌಸ್ ಇಮಾಮ್ ಗುಲಾಮ್ ಯಾಹ್ಯ ಭಕ್ಷ್ ಎಂಬಾತನು ಸಾಕ್ಷ್ಯಗಳ ಕೊರತೆಯಿಂದ ಇಲ್ಲಿನ ಸೆಷನ್ಸ್ ನ್ಯಾಯಾಲಯದಲ್ಲಿ ದೋಷಮುಕ್ತಗೊಂಡಿದ್ದಾನೆ.
ದಕ್ಷಿಣ ಮುಂಬೈಯ ಹಾಜ್ ಹೌಸ್‌ನಲ್ಲಿ 1996ರವರೆಗೆ ಇಮಾಮ್ ಆಗಿ ಕಾರ್ಯನಿರ್ವಹಿಸಿದ್ದ 47ರ ಹರೆಯ ಭಕ್ಷ್‌ನನ್ನು ಜಮ್ಮು-ಕಾಶ್ಮೀರದ ಮೂವರು ಭಯೋತ್ಪಾದಕರಿಗೆ ಆಶ್ರಯ ನೀಡಿದ ಆರೋಪದ ಮೇಲೆ 2006ರ ಜನವರಿ 14ರಂದು ಉಗ್ರ ನಿಗ್ರಹ ದಳವು (ಎಟಿಎಸ್) ಬಂಧಿಸಿತ್ತು.
ಕಾನೂನು ವಿರೋಧಿ ಚಟುವಟಿಕೆಗಳ ತಡೆ ಕಾಯ್ದೆಯಡಿ (ಯುಎಪಿಎ) ಪಶ್ಚಿಮ ಬಂಗಾಲ ಮೂಲದ ಭಕ್ಷ್ ಮೇಲೆ ಭಯೋತ್ಪಾದಕರಿಗೆ ಆಶ್ರಯ ಮತ್ತು ಪಿತೂರಿ ನಡೆಸಿದ ಆರೋಪಗಳನ್ನು ಹೊರಿಸಲಾಗಿತ್ತು.
ಆದರೆ ಇದನ್ನು ಪುರಾವೆ ಸಹಿತ ರುಜುವಾತುಪಡಿಸಲು ಪ್ರಾಸಿಕ್ಯೂಷನ್ ವಿಫಲವಾದ ಹಿನ್ನೆಲೆಯಲ್ಲಿ ನ್ಯಾಯಾಲಯವು ಆರೋಪಿಯನ್ನು ದೋಷಮುಕ್ತಗೊಳಿಸಿದೆ.
ಅದೇ ಹೊತ್ತಿಗೆ ಮೂವರು ಉಗ್ರಗಾಮಿಗಳಾದ ಖುರ್ಷೀದ್ ಅಹ್ಮದ್, ಮೊಹಮ್ಮದ್ ರಂಜಾನ್ ಅಬ್ದುಲ್ ಖಾಜಿ ಮತ್ತು ಅರ್ಷಾದ್ ಗುಲಾಂ ಅವರ ಮೇಲೆ ಯುಎಪಿಎ ಕಾಯ್ದೆಯಡಿಯಲ್ಲಿ ದೋಷಿಗಳು ಎಂದು ನ್ಯಾಯಾಲಯ ಘೋಷಿಸಿದ್ದು, ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಈ ಮೂವರನ್ನು 2006ರ ಜನವರಿ 6ರಂದು ಮುಂಬೈಯ ಸೆಂಟ್ರಲ್ ರೈಲ್ವೇ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಈ ಸಂದರ್ಭದಲ್ಲಿ ಇವರಿಂದ ಡಿಟೋನೇರಟುಗಳು, ಟೈಮರುಗಳು, ಇಲೆಕ್ಟ್ರಾನಿಕ್ ವಸ್ತುಗಳು, ಒಂದು ಪಿಸ್ತೂಲು ಮತ್ತು ಆರು ಜೀವಂತ ಗುಂಡುಗಳನ್ನು ಎಟಿಎಸ್ ವಶಪಡಿಸಿಕೊಂಡಿತ್ತು.
ಎಟಿಎಸ್ ಮೂಲಗಳ ಪ್ರಕಾರ ಈ ಮೂವರು ಉಗ್ರರು ಮೌಲಾನಾ ಭಕ್ಷ್ ಜತೆ ನಿರಂತರ ಸಂಪರ್ಕದಲ್ಲಿದ್ದರು ಮತ್ತು ಲಷ್ಕರ್ ಇ ತೋಯ್ಬಾ ಕಮಾಂಡರ್ ಸಲಾವುದ್ದೀನ್ ನಿರ್ದೇಶನದಂತೆ ಮುಂಬೈಗೆ ಬಂದಿದ್ದರು. ಸಲಾವುದ್ದೀನ್ ಮತ್ತು ನಗರದಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ನಡೆಸಲು ಯೋಜನೆ ರೂಪಿಸಿದ್ದ ಮೂವರು ಉಗ್ರರ ಜತೆ ಭಕ್ಷ ಸಂಬಂಧ ಹೊಂದಿದ್ದ ಎಂದು ಎಟಿಎಸ್ ಹೇಳಿದೆ.