ನಾವು ಯಾವುದೇ ಒಂದು ಧರ್ಮವನ್ನು ಪರಮ ಪಾವನ ಎಂದು ಹೇಳಲಾಗದು. ನಾನೊಬ್ಬ ಬೌದ್ಧ ಧರ್ಮೀಯ, ಆದರೆ ಈ ಧರ್ಮವೇ ಶ್ರೇಷ್ಠ ಧರ್ಮ ಎಂದು ನಾನು ಹೇಳಲಾರೆ. ಇದು ವ್ಯಕ್ತಿಗೆ ಯಾವುದು ಉತ್ತಮವೆನಿಸುತ್ತದೆ ಎಂಬ ಆತನ ದೃಷ್ಟಿಕೋನವನ್ನು ಅವಲಂಬಿಸಿದೆ ಎಂದು ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಹೇಳಿದ್ದಾರೆ.
ವಡೋದರದಲ್ಲಿ ನಡೆದ ಬೌದ್ಧ ಧರ್ಮದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡುತ್ತಿದ್ದ ಟಿಬೆಟ್‌ನ 14ನೇ ದಲೈ ಲಾಮಾ, ನಾವು ಎಲ್ಲಾ ಧರ್ಮಗಳನ್ನು ಗೌರವಿಸಬೇಕು; ಎಲ್ಲಾ ಧರ್ಮಗಳನ್ನು ಸಮಾನವಾಗಿ ಗೌರವಿಸುವ ಜಾತ್ಯತೀತ ರಾಷ್ಟ್ರ ಭಾರತ ಎಂದರು.
PTI
ಇದೇ ಹೊತ್ತಿನಲ್ಲಿ ಭಾರತೀಯ ಮಹಾಬೋಧಿ ಸಮಾಜದ ಹಿರಿಯ ಡಾ. ಭೂಪೇಂದ್ರ ಕುಮಾರ್ ಮೋದಿಯವರ ಹೇಳಿಕೆಯನ್ನು ಉಲ್ಲೇಖಿಸುತ್ತಾ ಚತುರೋಕ್ತಿಗಿಳಿದ ಆಧ್ಯಾತ್ಮಿಕ ಗುರು, ಭಾರತೀಯರು ನನ್ನನ್ನು ಭಾರತೀಯ ಎಂದೇ ಪರಿಗಣಿಸುತ್ತಾರೆ ಎಂದು ಮೋದಿಯವರು ಹೇಳಿದ್ದರು. ನಾನು ಹೇಳುತ್ತಿದ್ದೇನೆ -- ನಾನು ಭಾರತದ ಪುತ್ರ; ನನಗೆ ಜ್ಞಾನ ಮತ್ತು ಬುದ್ಧಿವಂತಿಕೆ ಬಂದದ್ದು ಭಾರತದಿಂದ ಮತ್ತು ಇದಕ್ಕಾಗಿ ನಾನು ಅತೀವ ಹೆಮ್ಮೆಪಟ್ಟುಕೊಂಡಿದ್ದೇನೆ ಎಂದರು.
ಆದರೂ ತಾನು ಟಿಬೆಟಿನ್ ಹೆತ್ತವರನ್ನು ಹೊಂದಿರುವುದರಿಂದ ನನ್ನಲ್ಲಿನ ಸಂಬಂಧ ಮತ್ತು ರಕ್ತ ಟಿಬೆಟಿನದ್ದು. ಆದರೆ ಆಧ್ಯಾತ್ಮದ ವಿಚಾರಕ್ಕೆ ಬಂದಾಗ ನಾನೊಬ್ಬ ಭಾರತೀಯ ಮತ್ತು ದೈಹಿಕವಾಗಿ ನಾನೊಬ್ಬ ಟಿಬೆಟಿಯನ್ ಎಂದು ತನ್ನ ವಾದಕ್ಕೆ ತಕ್ಕ ಸಮರ್ಥನೆ ನೀಡಿದರು.
ಭಾರತದ ವಿಶಿಷ್ಟ ಪರಂಪರೆ, ಸಂಸ್ಕೃತಿ ಮತ್ತು ಕೋಮು ಸಾಮರಸ್ಯವನ್ನು ಪ್ರಶಂಸಿಸಿದ ಲಾಮಾ, ಭಾರತವು ವಿಶಿಷ್ಟ ರಾಷ್ಟ್ರ; ಯಾಕೆಂದರೆ ಇದು ಹಲವು ಧರ್ಮಗಳ ಸಹಬಾಳ್ವೆಯ ಅಹಿಂಸಾತ್ಮಕ ಸಂಸ್ಕೃತಿಯನ್ನು ಅನುಸರಿಸುತ್ತಿದೆ. ಬೌದ್ಧರು ಮತ್ತು ಮುಸ್ಲಿಮರು ಸತ್ಯ ಮತ್ತು ಅಹಿಂಸಾತ್ಮಕ ಸಂಪ್ರದಾಯಗಳನ್ನು ಅನುಸರಿಸುತ್ತಿರುವುದರಿಂದ ಭಾರತದಲ್ಲಿ ಇವೆರಡು ಧರ್ಮಗಳ ನಡುವೆ ಹೆಚ್ಚಿನ ವ್ಯತ್ಯಾಸಗಳಿಲ್ಲ ಎಂದರು.
ಮತ್ತೂ ಮುಂದುವರಿದ ಅವರು, ಭಾರತೀಯರು 'ಗುರು' ಇದ್ದಂತೆ ಮತ್ತು ನಾವು ಅಂದರೆ ಟಿಬೆಟಿಯನ್ನರು 'ಚೇಲಾಗಳು' ಇದ್ದಂತೆ. ಯಾಕೆಂದರೆ ಬೌದ್ಧ ಧರ್ಮದ ಮೂಲ ಭಾರತ. ಹಾಗಾಗಿ ನಾನು ವಿಶ್ವದ ಯಾವುದೇ ಭಾಗಕ್ಕೆ ಪ್ರವಾಸ ಮಾಡುವಾಗ, ಅಲ್ಲಿ ನನ್ನನ್ನು ನಾನು ಭಾರತದ ದೂತ ಎಂದು ಪರಿಚಯಿಸಿಕೊಳ್ಳುತ್ತೇನೆ. ನಾನು ಅಹಿಂಸೆಯನ್ನು ಪಸರಿಸುತ್ತಿರುವುದರಿಂದ ನನ್ನ ಗುರು ಭಾರತ ಎಂದು ಟಿಬೆಟಿನ್ ಧಾರ್ಮಿಕ ಮುಖಂಡ ವಿವರಣೆ ನೀಡಿದ್ದಾರೆ.