ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ದಕ್ಷಿಣ ಭಾರತದಲ್ಲಿ ಸ್ಫೋಟ ಸಂಚು; ಹುಜಿ ಉಗ್ರನ ಸೆರೆ
(HuJI commander | Amjad Khwaja | Harkat-ul-Jihad-al-Islami | Hyderabad)
ಗಣರಾಜ್ಯೋತ್ಸವದಂದು ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲೊಂದರಲ್ಲಿ ಸ್ಫೋಟ ಸಂಚು ರೂಪಿಸುತ್ತಿದ್ದ ಎಂದು ಹೇಳಲಾಗಿರುವ 'ಹರ್ಕತ್ ಉಲ್ ಜಿಹಾದ್ ಅಲ್ ಇಸ್ಲಾಮಿ' ಭಯೋತ್ಪಾದಕ ಸಂಘಟನೆಯ ದಕ್ಷಿಣ ಭಾರತ ಅಗ್ರ ಕಮಾಂಡರ್ ಓರ್ವನನ್ನು ಸೋಮವಾರ ಚೆನ್ನೈಯಲ್ಲಿ ಬಂಧಿಸಲಾಗಿದೆ.
ಬಾಂಗ್ಲಾದೇಶ ಮೂಲದ ಹುಜಿ ಸಂಘಟನೆಯ ಎರಡನೇ ನಾಯಕ ಎನ್ನಲಾಗಿರುವ ಅಮ್ಜದ್ ಆಲಿಯಾಸ್ ಶೇಖ್ ಅಬ್ದುಲ್ ಖ್ವಾಜಾ ಎಂಬಾತನೇ ಬಂಧಿತ. ಈತ 2007ರ ಹೈದರಾಬಾದ್ ಅವಳಿ ಸ್ಫೋಟದ ರೂವಾರಿ ಎಂದು ಹೇಳಲಾಗಿದೆ. ಗೋಕುಲ್ ಚಾಟ್ ಮತ್ತು ಲುಂಬಿನಿ ಪಾರ್ಕ್‌ನಲ್ಲಿ ನಡೆದಿದ್ದ ಈ ಬಾಂಬ್ ಸ್ಫೋಟಗಳಲ್ಲಿ 42 ಮಂದಿ ಸಾವನ್ನಪ್ಪಿದ್ದರು.
ಓರ್ವ ಗಾರ್ಡ್ ಬಲಿಯಾಗಿದ್ದ 2005ರ ಟಾಸ್ಕ್ ಫೋರ್ಸ್ ಆಫೀಸ್ ಮೇಲಿನ ಆತ್ಮಹತ್ಯಾ ಬಾಂಬ್ ದಾಳಿಯಲ್ಲೂ ಪೊಲೀಸರಿಗೆ ಬೇಕಾಗಿದ್ದ ಅಮ್ಜದ್ ಹೈದರಾಬಾದ್ ಮೂಲದವನು.
ವರದಿಗಳ ಪ್ರಕಾರ 2003ರಿಂದ ಕರಾಚಿಯಲ್ಲಿ ಅಡಗಿದ್ದ ಅಮ್ಜದ್, ಗಣರಾಜ್ಯೋತ್ಸವ ದಿನದಂದು ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲೊಂದರಲ್ಲಿ ದುಷ್ಕೃತ್ಯ ನಡೆಸಲು ಭಾರತಕ್ಕೆ ಮರಳಿದ್ದ. ಆತನ ಉದ್ದೇಶ ಚೆನ್ನೈ ಅಥವಾ ಹೈದರಾಬಾದ್‌ಗಳಲ್ಲಿ ಬಾಂಬ್ ಸ್ಫೋಟ ನಡೆಸುವುದು ಎಂದು ಪೊಲೀಸರು ವಿವರಣೆ ನೀಡಿದ್ದಾರೆ.
ಆಂಧ್ರಪ್ರದೇಶ, ತಮಿಳುನಾಡು, ಪಶ್ಚಿಮ ಬಂಗಾಲ ಪೊಲೀಸರು ಮತ್ತು ಕೇಂದ್ರ ಸರಕಾರದ ಏಜೆನ್ಸಿಗಳ ಜಂಟಿ ಕಾರ್ಯಾಚರಣೆಯಲ್ಲಿ ಅಮ್ಜದ್‌ನನ್ನು ಬಂಧಿಸಲಾಗಿದೆ. ಹುಜಿ ಸಂಘಟನೆಯ ಕಾರ್ಯಾಚರಣೆ ಕುರಿತು ಕೊಲ್ಕತ್ತಾದಲ್ಲಿ ಇತ್ತೀಚೆಗಷ್ಟೇ ಬಂಧಿತನಾಗಿದ್ದ ವ್ಯಕ್ತಿಯೋರ್ವನಿಂದ ಮಾಹಿತಿಗಳನ್ನು ಪಡೆಯಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.
ಇದೀಗ ಪೊಲೀಸರ ವಶದಲ್ಲಿರುವ ಆತನನ್ನು ಮುಂದಿನ ವಿಚಾರಣೆಗಾಗಿ ಹೈದರಾಬಾದ್‌ಗೆ ಕೊಂಡೊಯ್ಯಲಾಗುತ್ತದೆ ಎಂದು ಇಲಾಖೆ ಮೂಲಗಳು ಹೇಳಿವೆ.