ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನಾನು ಭ್ರಷ್ಟ ರಾಜಕಾರಣಿಯಂತೆ ಕಾಣುತ್ತಿದ್ದೇನಾ?: ರಾಹುಲ್ ಪ್ರಶ್ನೆ (Rahul Gandhi | Corruption | India | Congress)
Bookmark and Share Feedback Print
 
ನಾನು ಭ್ರಷ್ಟ ಅಥವಾ ಮೌಲ್ಯಗಳಿಲ್ಲದ ರಾಜಕಾರಣಿಯಂತೆ ನಿಮಗೆ ಕಾಣಿಸುತ್ತಿದ್ದೇನಾ? ಸೋಮವಾರ ಇಲ್ಲಿನ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಎತ್ತಿದ ಪ್ರಶ್ನೆಯಿದು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ರಾಜಕೀಯಕ್ಕೆ ಸೇರುವಂತೆ ಒತ್ತಾಯಿಸಿದ 39ರ ಹರೆಯದ ಸಂಸದ, ರಾಷ್ಟ್ರ ಕಟ್ಟುವ ಕೆಲಸಕ್ಕೆ ತಮ್ಮ ಕೊಡುಗೆಯನ್ನೂ ನೀಡುವಂತೆ ವಿನಂತಿಸಿಕೊಂಡರು.
PTI


ಆದರೆ ಯುವ ಜನತೆಯ ಕಣ್ಮಣಿಯ ಕರೆಗೆ ವಿದ್ಯಾರ್ಥಿಗಳು ಸಂಭ್ರಮಪಡುವ ಬದಲು ತಮ್ಮ ಅಸಮಾಧಾನಗಳನ್ನು ತೋಡಿಕೊಂಡರು. ಇಂದಿನ ರಾಜಕಾರಣದಲ್ಲಿ ಯಾವುದೇ ನೈತಿಕ ಗುಣಮಟ್ಟಗಳು ಅಥವಾ ಮೌಲ್ಯಗಳಿಲ್ಲ, ಸಭ್ಯರು ಈ ಕ್ಷೇತ್ರಕ್ಕೆ ಕಾಲಿಡಲು ಹಿಂಜರಿಯುತ್ತಿದ್ದಾರೆ ಎಂದರು.

ಆಗ ತಟ್ಟನೆ ರಾಹುಲ್ ಮೇಲಿನ ಪ್ರಶ್ನೆ ಕೇಳಿ ನೆರೆದಿದ್ದ 500ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಸಂಚಲನ ಮೂಡಿಸಿದರು. ಅಲ್ಲದೆ ವಿದ್ಯಾರ್ಥಿಗಳ ನಿಲುವನ್ನೂ ಒಪ್ಪಿಕೊಂಡ ಅವರು, ಕೆಲವು ಭ್ರಷ್ಟ, ಹಿಂಸಾಪ್ರಿಯ ಮತ್ತು ವೈಯಕ್ತಿಕ ಹಿತಾಸಕ್ತಿ ಹೊಂದಿರುವ ರಾಜಕಾರಣಿಗಳು ಇರುವುದು ಹೌದು; ಆದರೆ ಎಲ್ಲರನ್ನೂ ಅದೇ ತಕ್ಕಡಿಯಲ್ಲಿ ತೂಗಬೇಡಿ ಎಂದು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿಕೊಂಡರು.

ನನ್ನದು ಕುಟುಂಬ ರಾಜಕಾರಣ..!
ತಾನು ಹುಟ್ಟಿದ ಕುಟುಂಬದ ಉಪನಾಮಧೇಯ 'ಗಾಂಧಿ'ಯ ರಾಜಕೀಯ ಲಾಭ ತನಗಾಗಿರುವುದನ್ನು ಮತ್ತು ತಾನು ಕುಟುಂಬ ರಾಜಕಾರಣ ಮಾಡುತ್ತಿರುವುದನ್ನು ರಾಹುಲ್ ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳೆದುರು ಒಪ್ಪಿಕೊಂಡಿದ್ದಾರೆ.

ಭಾರತದ ರಾಜಕಾರಣದ ಬಗ್ಗೆ ಮಾತನಾಡುತ್ತಾ ಅವರು, ಇಲ್ಲಿ ಈ ರಂಗ ಪ್ರವೇಶಿಸಲು ಇರುವುದು ನಾಲ್ಕು ದಾರಿಗಳು. ಮೊದಲನೆಯದು ನಿಮ್ಮಲ್ಲಿ ಹಣ ಮತ್ತು ಅಧಿಕಾರ ಇರಬೇಕು. ಹಾಗಿದ್ದಲ್ಲಿ ಯಾವಾಗ ಬೇಕಾದರೂ ಜುಬ್ಬಾ ತೊಡಬಹುದು ಎಂದರು.

ಎರಡನೇ ದಾರಿ ನಿಮ್ಮ ಸಂಬಂಧಿಕರು ಅಥವಾ ಕುಟುಂಬದ ಸದಸ್ಯರು ರಾಜಕೀಯದಲ್ಲಿರಬೇಕು. ಇದಕ್ಕೆ ಉತ್ತಮ ಉದಾಹರಣೆ ನಿಮ್ಮೆದುರು ನಿಂತಿರುವ ನಾನು ಎಂದು ಯಾವುದೇ ಮುಲಾಜಿಲ್ಲದೆ ಕುಟುಂಬ ರಾಜಕಾರಣವನ್ನು ಒಪ್ಪಿಕೊಂಡರು.

ಮೂರನೇಯದ್ದು ರಾಜಕೀಯದಲ್ಲಿದ್ದವರ ಸಹಕಾರದಿಂದ, ಅವರ ನಿರ್ದೇಶನದಿಂದ ಈ ಕ್ಷೇತ್ರಕ್ಕೆ ಧುಮುಕುವುದು ಮತ್ತು ಕೊನೆಯದು, ಜನರಿಗಾಗಿ ಕೆಲಸ ಮಾಡಿ, ಸಾಮಾನ್ಯ ಜನರ ಸಮಸ್ಯೆಗಳನ್ನು ಎತ್ತಿ ತೋರಿಸಿ, ಅವಿಶ್ರಾಂತರಾಗಿ ಅವರಿಗಾಗಿ ಬೆವರು ಸುರಿಸುವುದು. ಇದು ಅತ್ಯಂತ ಕಠಿಣ ವಿಧಾನ. ರಾಜಕೀಯಕ್ಕೆ ಬರಲು ಈ ಹಾದಿಯನ್ನು ಆರಿಸಿಕೊಂಡವರು ನಮ್ಮ ದೇಶದಲ್ಲಿ ಅತಿ ವಿರಳ ಎಂದು ರಾಹುಲ್ ವಿವರಣೆ ನೀಡಿದರು.
ಸಂಬಂಧಿತ ಮಾಹಿತಿ ಹುಡುಕಿ