ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » 'ವಿಶ್ವವನ್ನು ಭಾರತ ಮುನ್ನಡೆಸಬೇಕಾದರೆ ಗೋ ಮಾತೆ ಅಗತ್ಯ'
(Govindacharya | importance of cow | Vishma Mangal Gau-Gram Yatra | VHP)
ಹೀಗೆಂದು ಹೇಳಿರುವುದು ಬಿಜೆಪಿ ಮಾಜಿ ನಾಯಕ ಕೆ.ಎನ್. ಗೋವಿಂದಾಚಾರ್ಯ. ಭೂಮಿಯಲ್ಲಿ ಮಾನವಕುಲದ ಅಸ್ತಿತ್ವಕ್ಕಾಗಿ ಗೋವಿನ ಅಸ್ತಿತ್ವವೂ ಅಗತ್ಯ ಎಂದು ಅವರು ಹೇಳಿದ್ದಾರೆ.
ಅಮರಾವತಿಯಲ್ಲಿ ಮಾತನಾಡುತ್ತಿದ್ದ ಸ್ವದೇಶಿ ಚಳವಳಿಯ ಹರಿಕಾರ, ಭಾರತವು ಪ್ರಗತಿಯತ್ತ ಸಾಗಿ ವಿಶ್ವವನ್ನು ಮುನ್ನಡೆಸಬೇಕಾದರೆ ಗೋ ಮಾತೆಯನ್ನು ರಕ್ಷಿಸಲು ಯತ್ನಿಸಬೇಕು ಎಂದರು.
ವಿಶ್ವ ಮಂಗಲ ಗೋ ಗ್ರಾಮ ಯಾತ್ರೆ ಇಲ್ಲಿಗೆ ಆಗಮಿಸುವ ಹಿನ್ನೆಲೆಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಗೋವಿಂದಾಚಾರ್ಯ ಪ್ರಮುಖ ಭಾಷಣಕಾರರಾಗಿದ್ದರು.
ಗೋಮಾತೆಯನ್ನು ರಕ್ಷಿಸಿ: ಭಾಗ್ವತ್ ನಾಗ್ಪುರದಲ್ಲಿ ನಡೆದ ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗ್ವತ್, ಗೋಮಾತೆಯನ್ನು ರಕ್ಷಿಸುವಂತೆ ಆಗ್ರಹಿಸಿದ್ದಾರೆ.
ಗೋ ಸಂರಕ್ಷಣೆಯ ಅರಿವನ್ನು ಮೂಡಿಸುವ ಉದ್ದೇಶದಿಂದ ದೇಶದಾದ್ಯಂತ 25,000 ಕಿಲೋ ಮೀಟರಿಗೂ ಹೆಚ್ಚು ದೂರ 108 ದಿನಗಳ ಕಾಲ ನಡೆದಿದ್ದ ಈ ಯಾತ್ರೆ ಸೆಪ್ಟೆಂಬರ್ 30ರಂದು ಕುರುಕ್ಷೇತ್ರದಲ್ಲಿ ಆರಂಭವಾಗಿತ್ತು. ಅದನ್ನು ನಾಗ್ಪುರದಲ್ಲಿ ಸಮಾಪ್ತಿಗೊಳಿಸಲಾಯಿತು.
ಭಾರತೀಯ ಜೀವನ ವ್ಯವಸ್ಥೆಯಲ್ಲಿ ಹಸುವಿನ ಹಾಲು ಮತ್ತು ಮೂತ್ರ ಎರಡೂ ಅತ್ಯಮೂಲ್ಯವಾಗಿದ್ದು, ಔಷಧೀಯ ಗುಣಗಳನ್ನು ಹೊಂದಿರುವುದರಿಂದ ಆರೋಗ್ಯಕ್ಕೂ ಉತ್ತಮ. ಅಲ್ಲದೆ ಗ್ರಾಮೀಣ ಅರ್ಥ ವ್ಯವಸ್ಥೆ ಗೋವಿನ ಮೇಲೆ ಕೇಂದ್ರೀಕೃತವಾಗಿದೆ. ರೋಗ ನಿರೋಧಕ ಶಕ್ತಿಯೂ ಗೋವಿನಿಂದ ಮಾನವನಿಗೆ ಲಭಿಸಿದೆ. ಸರಕಾರಗಳು ಗೋ ಸಂರಕ್ಷಣೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಭಾಗ್ವತ್ ಒತ್ತಾಯಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಯೋಗ ಗುರು ಬಾಬಾ ರಾಮ್‌ದೇವ್, ಗೋ ಹತ್ಯೆಯನ್ನು ನಿಷೇಧಿಸುವಂತೆ ಆಗ್ರಹಿಸಿದ್ದಾರೆ. ಮಾನವ ಕುಲೋದ್ಧಾರ ಮಾಡುವ ಗೋ ಮಾತೆಯನ್ನು ಹತ್ಯೆಗೈಯಲು ಅವಕಾಶ ನೀಡಬಾರದು. ಸರಕಾರಗಳು ಈ ನಿಟ್ಟಿನಲ್ಲಿ ಯಾವುದೇ ರಾಜಕೀಯ ಮಾಡದೆ ಗೋ ಹತ್ಯೆ ನಿಷೇಧಿಸಬೇಕೆಂದು ಅವರು ಹೇಳಿದರು.