ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪ್ಲೀಸ್, ಕೆಲಸ ಕೊಡಿ: ಪ್ರಧಾನಿಗೆ ಕಿರಿಯ ಸಚಿವರ ಮೊರೆ (junior ministers | Prime Minister | Manmohan Singh | India)
Bookmark and Share Feedback Print
 
ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನಮ್ಮನ್ನು ಲೆಕ್ಕಕ್ಕೇ ತೆಗೆದುಕೊಳ್ಳದೆ ಹಿರಿಯ ಸಚಿವರು ಮುಂದುವರಿಯುತ್ತಾರೆ. ನಮ್ಮನ್ನು ತೀರಾ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಕೇಂದ್ರ ಸರಕಾರದ ಕಿರಿಯ ಸಚಿವರುಗಳು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ದೂರು ನೀಡಿದ್ದಾರೆ.

ರಾಜ್ಯ ಸಚಿವರುಗಳ ಸಮಸ್ಯೆಗಳನ್ನು ಮಂಗಳವಾರ ರಾಜಧಾನಿಯ ತನ್ನ ನಿವಾಸದಲ್ಲಿ ಆಲಿಸಿದ ಸಿಂಗ್, ಮುಂದಿನ ಸಂಪುಟ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸುತ್ತೇನೆ ಎಂದು ಭರವಸೆ ನೀಡಿದ್ದಾರೆ.

78 ಕಿರಿಯ ಸಚಿವರುಗಳ ಪೈಕಿ 38 ಮಂದಿ ಒಟ್ಟು ಸೇರಿ ಪ್ರಧಾನಿಯವರನ್ನು ಭೇಟಿಯಾಗಿದ್ದು, ಕಳೆದ ಜೂನ್‌ನಲ್ಲಿ ಅಧಿಕಾರ ವಹಿಸಿಕೊಂಡ ನಂತರ ಇದುವರೆಗೂ ತಮಗೆ ಮಹತ್ವದ ಕೆಲಸಗಳನ್ನು ನೀಡದೆ ನಿರ್ಲಕ್ಷಿಸಲಾಗಿದೆ ಎಂದು ದೂರು ನೀಡಿದರು.

ಸಚಿವಾಲಯದ ಕಾರ್ಯಗಳಲ್ಲಿ ತಮ್ಮನ್ನು ಬಳಸಿಕೊಳ್ಳಲಾಗುತ್ತಿಲ್ಲ ಎಂದು ಡಜನ್‌ನಷ್ಟು ರಾಜ್ಯ ಸಚಿವರು ಅಲವತ್ತುಕೊಂಡರೆ, ಇನ್ನು ಕೆಲವರು 'ನಾವು ಲೆಕ್ಕದಿಂದ ಹೊರಗಿನವರಾಗಿದ್ದೇವೆ' ಎಂದರು.

ಇದೇ ಕಾರಣದಿಂದ ತಾವು ಬಹುತೇಕ ಸಚಿವಾಲಯದಿಂದ ದೂರ ಉಳಿಯುತ್ತೇವೆ. ಕೆಲಸವಿಲ್ಲದ ನಾವು ಕಚೇರಿಯಲ್ಲಿ ಕುಳಿತು ಮಾಡುವುದಾದರೂ ಏನು ಎಂದು ಪ್ರಧಾನಿ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಪ್ರಶ್ನಿಸಿದ್ದಾರೆ.

ರೈಲ್ವೇ ಖಾತೆಯ ರಾಜ್ಯ ಸಚಿವ ಕಾಂಗ್ರೆಸ್‌ನ ಕೆ.ಎಚ್. ಮುನಿಯಪ್ಪ ಮತ್ತು ಇಂಡಿಯನ್ ಮುಸ್ಲಿಂ ಲೀಗ್‌ನ ಇ. ಅಹ್ಮದ್ ಹಾಗೂ ನಗರಾಭಿವೃದ್ಧಿ ಖಾತೆಯ ರಾಜ್ಯ ಸಚಿವ ತೃಣಮೂಲ ಕಾಂಗ್ರೆಸ್ ಮುಖಂಡ ಸೌಗತಾ ರಾಯ್ ಸೇರಿದಂತೆ ಹಲವು ರಾಜ್ಯ ಸಚಿವರು ತಮಗೆ ಕೆಲಸವೇ ಇಲ್ಲದಿರುವುದನ್ನು ಪ್ರಧಾನಿಯವರ ಗಮನಕ್ಕೆ ತಂದಿದ್ದಾರೆ.

ರೈಲ್ವೇ ಸಚಿವೆ ಮಮತಾ ಬ್ಯಾನರ್ಜಿಯವರು ತನ್ನ ಬಹುತೇಕ ಸಮಯವನ್ನು ಕಳೆಯುವುದು ತವರು ಪಶ್ಚಿಮ ಬಂಗಾಲದಲ್ಲಿ. ಹಾಗಾಗಿ ಇಲಾಖೆಗೆ ಸಂಬಂಧಪಟ್ಟ ಹೆಚ್ಚಿನ ಕೆಲಸಗಳು ಬಾಕಿ ಉಳಿದಿವೆ. ಆದರೆ ಈ ಜವಾಬ್ದಾರಿಯನ್ನು ಕನಿಷ್ಠ ಕಿರಿಯ ಸಚಿವರಿಗೂ ನೀಡುವುದಿಲ್ಲ ಎಂದು ಕರ್ನಾಟಕದ ಮುನಿಯಪ್ಪ ದೂರಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ.
ಸಂಬಂಧಿತ ಮಾಹಿತಿ ಹುಡುಕಿ