ಭಾನುವಾರ ನಿಧನರಾಗಿದ್ದ ಕಮ್ಯೂನಿಸ್ಟ್ ಧುರೀಣ ಜ್ಯೋತಿ ಬಸು ಅವರ ಪಾರ್ಥೀವ ಶರೀರದ ಅಂತಿಮ ಯಾತ್ರೆ ಇಂದು ಭಾವಪೂರ್ಣವಾಗಿ ನಡೆದಿದ್ದು, ಕೊಲ್ಕತ್ತಾದ ಬೀದಿಗಳಲ್ಲಿ ಸಾಗಿದ ಮೆರವಣಿಗೆ ವಿಧಾನಸಭೆಗೆ ತೆರಳಿ ಸಾರ್ವಜನಿಕ ದರ್ಶನ ಮುಗಿಸಿದೆ.
1977ರಿಂದ 2000ದವರೆಗೆ 23 ವರ್ಷಗಳ ಸುದೀರ್ಘ ಅವಧಿಯಲ್ಲಿ ಪಶ್ಚಿಮ ಬಂಗಾಲದ ಮುಖ್ಯಮಂತ್ರಿಯಾಗಿ ದಾಖಲೆ ಮಾಡಿದ್ದ ಬಸು ಜನಾನುರಾಗಿಯಾಗಿದ್ದವರು. ಅದು ಅವರ ಸಾವಿನ ನಂತರವೂ ಇಂದು ಮತ್ತೊಮ್ಮೆ ರುಜುವಾತಾಯಿತು. ಸಿಪಿಐಎಂ ಪಕ್ಷದ ಸಾವಿರಾರು ಕಾರ್ಯಕರ್ತರು ಮತ್ತು ಅಭಿಮಾನಿಗಳು ಬಸು ಅವರಿಗೆ ತಮ್ಮ ಅಂತಿಮ ನಮನವನ್ನು ಸಲ್ಲಿಸುವುದರೊಂದಿಗೆ ಬಸು ಇತಿಹಾಸ ಸೇರಿ ಹೋದರು.
ಇಂದು ಬೆಳಿಗ್ಗೆ ಅವರ ಮನೆಯಿಂದ ಹೊರಟ ಶವ ಮೆರವಣಿಗೆ ಕೊಲ್ಕತ್ತಾಗಳ ಬೀದಿಗಳಲ್ಲಿ ಸಾಗಿ ನಂತರ ವಿಧಾನಸಭೆಯನ್ನು ಮಧ್ಯಾಹ್ನದ ಹೊತ್ತಿಗೆ ತಲುಪಿತ್ತು. ಈ ಸಂದರ್ಭದಲ್ಲಿ ಬೀದಿಗಳಲ್ಲಿ ಸಾಲುಗಟ್ಟಿ ಶಿಸ್ತಿನಿಂದ ಸಹಕರಿಸಿದ ಅಭಿಮಾನಿಗಳು ತಮ್ಮ ಭಾಷ್ಪಾಂಜಲಿ ಸಲ್ಲಿಸಿದರು.
ಆದರೆ ವಿಧಾನಸಭೆಯ ಹೊರ ಆವರಣದಲ್ಲಿ ನಡೆದ ಸಾರ್ವಜನಿಕ ದರ್ಶನದ ಸಂದರ್ಭದಲ್ಲಿ ಸಮರೋಪಾದಿಯಲ್ಲಿ ಹರಿದು ಬಂದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡಬೇಕಾಯಿತು. ಈ ಹೊತ್ತಿನಲ್ಲಿ ಕಾಲ್ತುಳಿತ ನಡೆಯುವ ಭೀತಿಯೂ ಉಂಟಾಗಿತ್ತು. ನೂಕುನುಗ್ಗಲಿನಿಂದ ಹಲವರು ಗಾಯಗೊಂಡು ಆಸ್ಪತ್ರೆ ಸೇರಿರುವ ಬಗ್ಗೆಯೂ ವರದಿಗಳು ಬಂದಿವೆ.
ಅಂತಿಮ ಯಾತ್ರೆಯಲ್ಲಿ ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್, ಸೀತಾರಾಂ ಯೆಚೂರಿ, ಪಶ್ಚಿಮ ಬಂಗಾಲ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ, ಕೇರಳ ಮತ್ತು ತ್ರಿಪುರಾ ಮುಖ್ಯಮಂತ್ರಿಗಳಾದ ವಿ.ಎಸ್. ಅಚ್ಚುತ್ತಾನಂದನ್ ಮ್ತತು ಮಾಣಿಕ್ ಸರ್ಕಾರ್, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮುಂತಾದ ಮುಖಂಡರು ಭಾಗವಹಿಸಿದ್ದರು.
ಬಸು ಮೃತದೇಹವನ್ನು ಅಂತ್ಯಸಂಸ್ಕಾರ ನಡೆಸದೆ, ಅವರಿಚ್ಛೆಯಂತೆ ಇಲ್ಲಿನ ಜನಪ್ರಿಯ ವೈದ್ಯಕೀಯ ಆಸ್ಪತ್ರೆಗೆ ಸಂಶೋಧನೆಗೆ ನೀಡಲಾಗಿದೆ.