ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕನ್ಯತ್ವ ಬೇಕಾಗಿಲ್ಲ, ಸೆಕ್ಸ್ ತಪ್ಪಲ್ಲ; ಖುಷ್ಬೂಗೆ ಕೋರ್ಟ್ ತರಾಟೆ
(virginity | south-Indian film actress | Khusboo | pre-marital sex)
ಕನ್ಯತ್ವ ಬೇಕಾಗಿಲ್ಲ, ಸೆಕ್ಸ್ ತಪ್ಪಲ್ಲ; ಖುಷ್ಬೂಗೆ ಕೋರ್ಟ್ ತರಾಟೆ
ನವದೆಹಲಿ, ಬುಧವಾರ, 20 ಜನವರಿ 2010( 10:43 IST )
ವಿವಾಹಪೂರ್ವ ಲೈಂಗಿಕತೆ ಮತ್ತು ಕನ್ಯತ್ವ ಕುರಿತು ದಕ್ಷಿಣ ಭಾರತದ ಜನಪ್ರಿಯ ನಟಿ ಖುಷ್ಬೂ ಐದು ವರ್ಷಗಳ ಹಿಂದೆ ನೀಡಿದ್ದ ವಿವಾದಿತ ಹೇಳಿಕೆಯನ್ನು ಪ್ರಶ್ನಿಸಿರುವ ಸರ್ವೋಚ್ಚ ನ್ಯಾಯಾಲಯ, ಇಂತಹ ಭಾವನಾತ್ಮಕ ಹೇಳಿಕೆಯನ್ನು ನೀಡುವ ಅಗತ್ಯವೇನಿತ್ತು ಎಂದು ತರಾಟೆಗೆ ತೆಗೆದುಕೊಂಡಿದೆ.
2005ರಲ್ಲಿ ಪತ್ರಿಕೆಯೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ಖುಷ್ಬೂ, ಮದುವೆಗಿಂತ ಮುಂಚೆ ಲೈಂಗಿಕ ಚಟುವಟಿಕೆ ನಡೆಸುವುದು ತಪ್ಪಲ್ಲ, ಆದರೆ ಅದಕ್ಕೆ ಬೇಕಾದ ಮುನ್ನೆಚ್ಚೆರಿಕೆಗಳನ್ನು ತೆಗೆದುಕೊಳ್ಳಬೇಕು ಎಂದಿದ್ದರು.
PR
ಅಲ್ಲದೆ ವಿದ್ಯಾವಂತನೊಬ್ಬ ತನ್ನ ಹೆಂಡತಿ ಕನ್ಯೆಯಾಗಿರಬೇಕು ಎಂದು ನಿರೀಕ್ಷಿಸುವುದು ಕೂಡ ಸರಿಯಲ್ಲ ಎಂದು ಅವರು ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದರು.
ಆದರೆ ಇದಕ್ಕೆ ತಮಿಳುನಾಡು ಸೇರಿದಂತೆ ದೇಶದ ವಿವಿಧೆಡೆ ಭಾರೀ ಪ್ರತಿಭಟನೆಗಳೂ ನಡೆದಿದ್ದವು. ಒಂದು ಕಾಲದಲ್ಲಿ ಅಭಿಮಾನಿಗಳ ಹೃದಯದಲ್ಲಿ ಮನೆ ಮಾಡಿದ್ದ ಈ ನಟಿಗೆ ಕಟ್ಟಲಾಗಿದ್ದ ದೇವಸ್ಥಾನವನ್ನು ಕೂಡ ಇದೇ ಸಂದರ್ಭದಲ್ಲಿ ಧ್ವಂಸ ಮಾಡಿ ಆಕ್ರೋಶ ವ್ಯಕ್ತಪಡಿಸಲಾಗಿತ್ತು.
ಅಪೆಕ್ಸ್ ವಿಚಾರಣೆ... ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಖುಷ್ಬೂ ಮೇಲೆ 23 ವಿವಿಧ ಪ್ರಕರಣಗಳು ದಾಖಲಾಗಿದ್ದು, ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ನ್ಯಾಯಾಲಯ, ಪ್ರಶ್ನೆಯನ್ನು ಕೇಳಲಾದ ಮತ್ತು ಉತ್ತರಿಸಿದ ಸಂದರ್ಭವನ್ನು ಎರಡು ವಾರಗಳೊಳಗೆ ದಾಖಲೆ ಸಹಿತ ನೀಡುವಂತೆ ಆಕೆಯ ವಕೀಲರಿಗೆ ನ್ಯಾಯಾಧೀಶರು ಸೂಚಿಸಿದ್ದಾರೆ.
ಅದಕ್ಕೂ ಮೊದಲು ಖುಷ್ಬೂ ತಮಿಳು ಪತ್ರಿಕೆಗೆ ನೀಡಿದ್ದ ಸಂದರ್ಶನದ ಅನುವಾದವನ್ನು ನ್ಯಾಯಾಲಯಕ್ಕೆ ನೀಡಲಾಯಿತು.
ವಿವಾಹಪೂರ್ವ ಲೈಂಗಿಕತೆ ಮತ್ತು ಏಡ್ಸ್ ಬಗ್ಗೆ ಮಾತ್ರ ಖುಷ್ಬೂ ಅವರಲ್ಲಿ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರ ನೀಡುವುದು ಅವರ ವಾಕ್ ಸ್ವಾತಂತ್ರ್ಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಎಂದು ನ್ಯಾಯಾಲಯಕ್ಕೆ ನಟಿ ಪರ ವಕೀಲೆ ಪಿಂಕಿ ಆನಂದ್ ವಿವರಿಸಿದ್ದಾರೆ.
ಖುಷ್ಬೂ ನೀಡಿದ್ದ ಹೇಳಿಕೆಯನ್ನು ವಕೀಲೆಯ ಮುಖಾಂತರ ತಿಳಿದುಕೊಂಡ ಮುಖ್ಯ ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್, ಜೆ.ಎಂ. ಪಂಚಾಲ್ ಮತ್ತು ಬಿ.ಎಸ್. ಚೌಹಾನ್, ಕನ್ಯತ್ವದ ಕುರಿತು ಇಂತಹ ದೊಡ್ಡ ಹೇಳಿಕೆ ನೀಡುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದರು. ಆದರೆ ಇದೇ ಕಾರಣದಿಂದ ಪ್ರಕರಣದಲ್ಲಿ ಆಕೆಯ ವಿರುದ್ಧ ತೀರ್ಪು ಬರಬಹುದೆಂದು ನಿರೀಕ್ಷಿಸಬೇಕಾಗಿಲ್ಲ ಎಂದು ನ್ಯಾಯಾಲಯ ತಕ್ಷಣವೇ ಸ್ಪಷ್ಟಪಡಿಸಿದೆ.
ಎಂ.ಎಫ್. ಹುಸೇನ್, ರಿಚರ್ಡ್ ಗೇರ್ ಮತ್ತು ಶಿಲ್ಪಾ ಶೆಟ್ಟಿ ಪ್ರಕರಣಗಳಂತೆ ಖುಷ್ಬೂ ಕೂಡ ತನ್ನ ಮೇಲೆ ದೇಶದಾದ್ಯಂತ ಪ್ರಕರಣಗಳು ದಾಖಲಾಗುತ್ತಿದ್ದಂತೆ, ಇವುಗಳ ವಿರುದ್ಧ ತಡೆ ನೀಡುವಂತೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಸದಾ ಒಂದಿಲ್ಲೊಂದು ವಿವಾದದಲ್ಲಿ ಮುಳುಗೇಳುತ್ತಿರುವ ಖುಷ್ಬೂ, ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಚಪ್ಪಲಿ ಧರಿಸಿ ಮತ್ತೊಂದು ಆಕ್ರೋಶವನ್ನು ಎದುರಿಸಿದ್ದರು. ಇದನ್ನು ತೀವ್ರವಾಗಿ ಖಂಡಿಸಿದ್ದ ಹಿಂದೂ ಸಂಘಟನೆಗಳು, ಮುಸ್ಲಿಂ ನಟಿ ಪರಧರ್ಮಕ್ಕೆ ಅವಮಾನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದವು.