ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕರುಣಾನಿಧಿ ಉತ್ತರಾಧಿಕಾರಕ್ಕೆ ಕಿತ್ತಾಡುತ್ತಿದ್ದಾರೆ ಮಕ್ಕಳು..! (Tamil Nadu | Chief Minister | Karunanidhi | M K Azhagiri)
Bookmark and Share Feedback Print
 
ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಕಳೆದ ಕೆಲವು ಸಮಯದಿಂದ ತಮಿಳುನಾಡು ಮುಖ್ಯಮಂತ್ರಿ 85ರ ಹರೆಯದ ಎಂ. ಕರುಣಾನಿಧಿ ಹೇಳುತ್ತಾ ಬಂದಿದ್ದಾರೆ. ಆದರೆ ಉತ್ತರಾಧಿಕಾರಿಯ ವಿಚಾರದಲ್ಲಿ ಇಬ್ಬರು ಪುತ್ರರಾದ ಎಂ.ಕೆ. ಸ್ಟಾಲಿನ್ ಮತ್ತು ಎಂ.ಕೆ. ಅಳಗಿರಿ ನಡುವೆ ಹೊಯ್‌ಕೈ ನಡೆಯುತ್ತಿದೆ ಎಂದು ವರದಿಗಳು ಹೇಳಿವೆ.

ತನ್ನ ರಾಜಕೀಯ ಜೀವನವನ್ನು ನೆಲ್ಸನ್ ಮಂಡೇಲಾ, ಜ್ಯೋತಿ ಬಸು ಮತ್ತು ಪೆರಿಯಾರ್ ಅವರಿಗೆ ಹೋಲಿಸುತ್ತಾ, ಅವರಂತೆ ತಾನು ಕೂಡ ಕೊನೆಯ ಕಾಲದಲ್ಲಿ ರಾಜಕಾರಣದಿಂದ ದೂರ ಉಳಿಯುತ್ತೇನೆ. ಪಕ್ಷವನ್ನು ಮತ್ತು ರಾಜ್ಯವನ್ನು ಮುನ್ನಡೆಸಲು ಸಾಕಷ್ಟು ಸಮರ್ಥ ನಾಯಕರಿದ್ದಾರೆ ಎಂದು ಡಿಎಂಕೆ ಮುಖಂಡ ಎರಡು ದಿನಗಳ ಹಿಂದೆ ತನ್ನ ಮಾತನ್ನು ಪುನರುಚ್ಛರಿಸಿದ್ದರು.

ಆದರೆ ಕರುಣಾನಿಧಿ ನಿವೃತ್ತಿಯಾಗುವುದಿಲ್ಲ ಎಂದು ಅಳಗಿರಿ ಇದೀಗ ಸ್ಪಷ್ಟಪಡಿಸುವ ಮೂಲಕ ರಾಜ್ಯದ ಚುಕ್ಕಾಣಿ ಸ್ಟಾಲಿನ್ ಪಾಲಾಗುವುದನ್ನು ತಪ್ಪಿಸಲು ಪರೋಕ್ಷ ಯತ್ನ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಕರುಣಾ ಒಲವು ಸ್ಟಾಲಿನ್ ಕಡೆ?
ತಾನು ರಾಜಕೀಯದಿಂದ ನಿವೃತ್ತಿಯಾಗುತ್ತೇನೆ ಎಂದು ಹೇಳುವ ಹೊತ್ತಿನಲ್ಲಿ ತನ್ನ ಪುತ್ರನನ್ನೇ ತಮಿಳುನಾಡು ಉಪಮುಖ್ಯಮಂತ್ರಿ ಸ್ಥಾನದಲ್ಲಿ ತಂದು ಕೂರಿಸಿದ್ದರು ಕರುಣಾನಿಧಿ.
PTI


ಆ ಮೂಲಕ ರಾಜ್ಯದಲ್ಲಿ ತನ್ನ ಉತ್ತರಾಧಿಕಾರಿ ಸ್ಟಾಲಿನ್ ಎಂಬುದನ್ನು ಪರೋಕ್ಷವಾಗಿ ಅವರು ಸಾರಿದ್ದರು. ಆರೋಗ್ಯ ದಿನದಿಂದ ದಿನಕ್ಕೆ ಹದಗೆಡುತ್ತಿರುವ ಕಾರಣ ಎಲ್ಲಾ ಕಡೆ ತಿರುಗಿ ಸಮಸ್ಯೆಗಳನ್ನು ಆಲಿಸಲಾಗುತ್ತಿಲ್ಲ ಎಂದು ಹೇಳಿದ್ದ ಕರುಣಾ, ಮೊದಲು ಪಕ್ಷದ ಹಿರಿಯರಿಗೆ ಡಿಸಿಎಂ ಹುದ್ದೆಯನ್ನು 'ಅಲಂಕರಿಸುವಂತೆ' ಕೇಳಿಕೊಂಡಿದ್ದರು.

ಆದರೆ ಅವರು ತಮಗೆ ಬೇಡ, ಸ್ಟಾಲಿನ್ ಆ ಜವಾಬ್ದಾರಿಗೆ ಸೂಕ್ತ ಎಂದು ಪಕ್ಷದ ಮುಖಂಡರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದ ಕಾರಣ, ಪುತ್ರನನ್ನೇ ಉಪಮುಖ್ಯಮಂತ್ರಿಯನ್ನಾಗಿ ಮುಖ್ಯಮಂತ್ರಿ ನೇಮಕ ಮಾಡಿಕೊಂಡಿದ್ದರು. ಇದೂ ಒಂದು ಅಪ್ಪ-ಮಕ್ಕಳ ಪಕ್ಷ ಎಂಬ ಆರೋಪ ಈ ಸಂದರ್ಭದಲ್ಲಿ ಬಂದಿತ್ತು.

ನನ್ನ ತಂದೆ ನಿವೃತ್ತಿಯಾಗಲ್ಲ: ಅಳಗಿರಿ
ಡಿಎಂಕೆ ಮುಖಂಡನ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಅವರ ಹಿರಿಯ ಪುತ್ರ, ಕೇಂದ್ರ ರಸಗೊಬ್ಬರ ಖಾತೆ ಸಚಿವ ಅಳಗಿರಿ, ತಂದೆಯ ನಿವೃತ್ತಿ ಸುದ್ದಿಗಳನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದಾರೆ.

ಕರುಣಾನಿಧಿಯವರು ಸಕ್ರಿಯ ರಾಜಕಾರಣದಿಂದ ನಿವೃತ್ತಿಯಾಗುವುದಿಲ್ಲ. ಮುಖ್ಯಮಂತ್ರಿಯಾಗಿ ಅವರು ಮುಂದುವರಿಯುತ್ತಾರೆ. ಹಾಗೆ ಸಚಿನ್ ತೆಂಡೂಲ್ಕರ್ ಕೂಡ ತಾನು ನಿವೃತ್ತಿಯಾಗುತ್ತೇನೆ ಎಂದು ಹೇಳುತ್ತಿದ್ದಾರೆ. ಆದರೆ ಅವರು ರನ್ ಗಳಿಸುವುದನ್ನು ನಿಲ್ಲಿಸಿದ್ದಾರೆಯೇ ಎಂದು ಪ್ರಶ್ನೆ ಕೇಳಿದವರನ್ನೇ ಬೆಚ್ಚಿ ಬೀಳಿಸಿದ್ದಾರೆ ಅಳಗಿರಿ.

ಅಲ್ಲದೆ ತಾನು ರಾಜ್ಯ ರಾಜಕಾರಣದಲ್ಲಿ ಆಸಕ್ತನಾಗಿದ್ದೇನೆ ಮತ್ತು ಇದೇ ಕಾರಣದಿಂದ ಸಹೋದರರ ನಡುವೆ ಅಧಿಕಾರಕ್ಕಾಗಿ ಕಿತ್ತಾಟ ನಡೆಯುತ್ತಿದೆ ಎಂಬ ವರದಿಗಳನ್ನೂ ಇದೇ ಸಂದರ್ಭದಲ್ಲಿ ಅವರು ತಳ್ಳಿ ಹಾಕಿದ್ದಾರೆ.

ನಾನು ಕೇಂದ್ರ ಸಚಿವನಾಗಿ ಮುಂದುವರಿಯುತ್ತೇನೆ. ಆ ಸ್ಥಾನದಲ್ಲಿದ್ದೇ ರಾಜ್ಯದ ಜನತೆಯ ಸೇವೆಯನ್ನು ಮಾಡುತ್ತೇನೆ. ರಾಜ್ಯ ರಾಜಕಾರಣಕ್ಕೆ ಮರಳುತ್ತೇನೆ ಅಥವಾ ಈಗಿರುವ ಜವಾಬ್ದಾರಿ ತೃಪ್ತಿಯಿಲ್ಲ ಎಂಬ ವರದಿಗಳಲ್ಲಿ ಯಾವುದೇ ಹುರುಳಿಲ್ಲ ಎಂದು ಅಳಗಿರಿ ಸ್ಪಷ್ಟಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ