ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಕಾಂಗ್ರೆಸ್ ಹಿನ್ನಡೆಗೆ ಕಾಂಗ್ರೆಸ್ಸೇ ಕಾರಣ: ರಾಹುಲ್ ಗಾಂಧಿ
(Rahul Gandhi | Congress | Madhya Pradesh | Sonia Gandhi)
ಕಾಂಗ್ರೆಸ್ ಹಿನ್ನಡೆಗೆ ಕಾಂಗ್ರೆಸ್ಸೇ ಕಾರಣ: ರಾಹುಲ್ ಗಾಂಧಿ
ಭೋಪಾಲ್, ಬುಧವಾರ, 20 ಜನವರಿ 2010( 12:18 IST )
ಕಾಂಗ್ರೆಸ್ ಕಳೆದ ಕೆಲವು ವರ್ಷಗಳಲ್ಲಿ ಹಿನ್ನಡೆ ಅನುಭವಿಸಿದ್ದರೆ ಅದಕ್ಕೆ ಪಕ್ಷದಲ್ಲಿನ ಕೊರತೆಯೇ ಕಾರಣ ಹೊರತು ಇತರ ಪಕ್ಷಗಳಲ್ಲ ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ಬಲಪಡಿಸುವ ಉದ್ದೇಶದಿಂದ ದೇಶದಾದ್ಯಂತ ಪ್ರವಾಸ ಮಾಡುತ್ತಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಹಾಗೂ ಮುಂದಿನ ಪ್ರಧಾನಿ ಎಂದೇ ಬಿಂಬಿತವಾಗುತ್ತಿರುವ ರಾಹುಲ್ ಪ್ರಸಕ್ತ ಮಧ್ಯಪ್ರದೇಶದ ಗ್ವಾಲಿಯರ್ ಮತ್ತು ಭೋಪಾಲ್‌ಗಳಲ್ಲಿದ್ದಾರೆ.
PTI
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ರ‌್ಯಾಲಿಗಳನ್ನು ನಡೆಸಿರುವ ಅವರು, ಒಗ್ಗಟನ್ನು ಕಾಯ್ದುಕೊಳ್ಳುವಂತೆ ಕಾರ್ಯಕರ್ತರಲ್ಲಿ ಮನವಿ ಮಾಡಿದರು.
ಕಾಂಗ್ರೆಸ್ ಕಳೆದ ಐದಾರು ವರ್ಷಗಳಲ್ಲಿ ಅನುಭವಿಸಿದ ಹಿನ್ನಡೆಗೆ ಬೇರೆ ಯಾರೂ ಕಾರಣರಲ್ಲ. ನಮ್ಮ ಪಕ್ಷದವರು ಒಗ್ಗಟ್ಟು ಪ್ರದರ್ಶಿಸದೆ ಇರುವುದರಿಂದ ಹೀಗಾಯಿತು. ಆದರೆ ಅವರೆಲ್ಲ ತಮ್ಮ ನಿಲುವುಗಳನ್ನು ಬದಲಾಯಿಸಿಕೊಳ್ಳುವ ಅನಿವಾರ್ಯತೆಯಿದೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಮತ್ತು ಪಕ್ಷದ ಜಿಲ್ಲಾಧ್ಯಕ್ಷರುಗಳ ಜಂಟಿ ಸಭೆಯನ್ನು ಉದ್ದೇಶಿಸಿ ಸಲಹೆ ನೀಡಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಕಂಡ ಗೆಲುವನ್ನು ಇಲ್ಲೂ ಕಾಣಲು ಸಾಧ್ಯವಿದೆ. ಆದರೆ ಅದಕ್ಕಾಗಿ ನಾವು ಒಂದಾಗಬೇಕಿದೆ. ಭಿನ್ನ ಹಾದಿಗಳನ್ನು ತ್ಯಜಿಸಿ ಒಮ್ಮತದ ನಿಲುವುಗಳಿಗೆ ಬೆಂಬಲ ಸೂಚಿಸಬೇಕಿದೆ ಎಂದು ಪಕ್ಷದ ರಾಜ್ಯ ಘಟಕಕ್ಕೆ ಕರೆ ನೀಡಿದರು.
ದಲಿತ ಭೇಟಿಯಷ್ಟೇ ಹೈಲಟ್ ಯಾಕೆ? ತಾನು ಎಲ್ಲಾ ವರ್ಗದ ಜನರನ್ನು ಭೇಟಿಯಾಗಿರುವುದರ ಹೊರತಾಗಿಯೂ ಮಾಧ್ಯಮಗಳು ಕೇವಲ ದಲಿತರನ್ನು ಮುಖಾಮುಖಿಯಾಗ ಸುದ್ದಿಗಳಿಗೇ ಹೆಚ್ಚು ಪ್ರಾಮುಖ್ಯತೆ ನೀಡುತ್ತಿವೆ ಎಂದು ಇದೇ ಸಂದರ್ಭದಲ್ಲಿ ರಾಹುಲ್ ಕಿಡಿ ಕಾರಿದ್ದಾರೆ.
ನಾನು ನಿನ್ನೆ ನಾಲ್ಕು ಕಾಲೇಜುಗಳು ಹಾಗೂ ಒಂದು ಬುಡಕಟ್ಟು ಜನಾಂಗದ ಆಶ್ರಮಕ್ಕೆ ಭೇಟಿ ನೀಡಿದ್ದೆ. ಆದರೆ ಮಾಧ್ಯಮಗಳು ನಾನು ಆಶ್ರಮಕ್ಕೆ ಭೇಟಿ ನೀಡಿರುವುದನ್ನು ಮಾತ್ರ ಎದ್ದು ಕಾಣುವಂತೆ ಪ್ರಕಟಿಸಿವೆ. ಇದು ಸರಿಯಲ್ಲ ಎಂದು ಮಾಧ್ಯಮಗಳಿಗೆ ಅವರು ಕಿವಿ ಮಾತು ಹೇಳಿದರು.