ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ತೆಲಂಗಾಣ ಆಗ್ರಹಿಸಿ ಇಬ್ಬರ ಆತ್ಮಾಹುತಿ; ಭುಗಿಲೆದ್ದ ಹಿಂಸಾಚಾರ
(Telangana | Andhra Pradesh | K. Venugopal Reddy | Student suicide)
ತೆಲಂಗಾಣ ಆಗ್ರಹಿಸಿ ಇಬ್ಬರ ಆತ್ಮಾಹುತಿ; ಭುಗಿಲೆದ್ದ ಹಿಂಸಾಚಾರ
ಹೈದರಾಬಾದ್, ಬುಧವಾರ, 20 ಜನವರಿ 2010( 12:54 IST )
ತೆಲಂಗಾಣ ಪ್ರತ್ಯೇಕ ರಾಜ್ಯ ಕುರಿತು ಕೇಂದ್ರ ಸರಕಾರ ವಿಳಂಬ ನೀತಿ ಅನುಸರಿಸುತ್ತಿರುವುದನ್ನು ವಿರೋಧಿಸಿ ಉಸ್ಮಾನಿಯಾ ವಿಶ್ವವಿದ್ಯಾಲಯದ ಇಬ್ಬರು ವಿದ್ಯಾರ್ಥಿಗಳು ಪ್ರಾಣಾರ್ಪಣೆ ಮಾಡಿಕೊಂಡ ಬೆನ್ನಿಗೆ ಕರೆ ನೀಡಿದ ಬಂದ್‌ಗೆ ತೆಲಂಗಾಣ ಪ್ರಾಂತ್ಯ ಸ್ತಬ್ತವಾಗಿದ್ದು, ಹಿಂಸಾಚಾರ ಭುಗಿಲೆದ್ದಿದೆ.
ಉಸ್ಮಾನಿಯಾ ಯುನಿವರ್ಸಿಟಿಯ ಎಂಸಿಎ ಅಂತಿಮ ವರ್ಷದ ವಿದ್ಯಾರ್ಥಿ ಕೆ. ವೇಣುಗೋಪಾಲ ರೆಡ್ಡಿ ಸೋಮವಾರ ತಡರಾತ್ರಿ ಹಾಗೂ ಬಿಎಸ್ಸಿ ಮೊದಲ ವರ್ಷದ ವಿದ್ಯಾರ್ಥಿನಿ ಸುವರ್ಣಮ್ಮ ಮಂಗಳವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರತ್ಯೇಕ ತೆಲಂಗಾಣಕ್ಕಾಗಿ ಆಗ್ರಹಿಸಿ ಇಬ್ಬರೂ ಸ್ವತಃ ಬೆಂಕಿ ಹಚ್ಚಿಕೊಂಡು ಆತ್ಮಾಹುತಿ ಮಾಡಿದ್ದು, ತಮ್ಮ ಮರಣಪತ್ರದಲ್ಲಿ ತೆಲಂಗಾಣಕ್ಕೆ ಸ್ಥಾನಮಾನ ನೀಡುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಒತ್ತಾಯಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಇಂದು ವೇಣುಗೋಪಾಲ್ ಅವರ ಶವ ಮೆರವಣಿಗೆಗೆ ಯತ್ನಿಸಿದಾಗ ಮತ್ತಷ್ಟು ಹಿಂಸಾಚಾರಗಳು ಕಾಣಿಸಿಕೊಂಡವು. ಪೊಲೀಸರೆಡೆಗೆ ಕಲ್ಲು ತೂರಾಟ ನಡೆಸಿ, ಹಿಂಸಾಚಾರ ಉಲ್ಬಣಗೊಂಡಾಗ ಲಾಠಿಚಾರ್ಜ್ ನಡೆಸಲಾಗಿದೆ. ಹಲವು ಪೊಲೀಸ್ ವಾಹನಗಳಿಗೆ ಈ ಸಂದರ್ಭದಲ್ಲಿ ಬೆಂಕಿ ಹಚ್ಚಲಾಗಿದೆ ಎಂದು ವರದಿಗಳು ಹೇಳಿವೆ.
ಸೋಮವಾರ ಆತ್ಮಹತ್ಯೆ ಮಾಡಿಕೊಂಡಿದ್ದ ವೇಣುಗೋಪಾಲ್ ಶವವನ್ನು ಅಂತ್ಯಸಂಸ್ಕಾರ ನಡೆಸಲು ನಿರಾಕರಿಸಿದ್ದ ವಿದ್ಯಾರ್ಥಿಗಳು, ಯುನಿವರ್ಸಿಟಿ ಆವರಣದಲ್ಲಿಟ್ಟು ಪ್ರತಿಭಟನೆ ನಡೆಸುತ್ತಿದ್ದರು.
ಇದರ ನಡುವೆಯೇ ಹೈದರಾಬಾದ್ ಸೇರಿದಂತೆ ತೆಲಂಗಾಣ ಪ್ರಾಂತ್ಯದ ಹತ್ತು ಜಿಲ್ಲೆಗಳಲ್ಲಿ ಬುಧವಾರದಿಂದ ಎರಡು ದಿನಗಳ ಬಂದ್‌ಗೆ ಜಂಟಿ ಕ್ರಿಯಾ ಸಮಿತಿ ಕರೆ ನೀಡಿದ್ದು, ಪರಿಸ್ಥಿತಿ ಕೈ ಮೀರುವ ಎಲ್ಲಾ ಲಕ್ಷಣಗಳೂ ಗೋಚರಿಸುತ್ತಿವೆ.
ಇಂದು ಆಂಧ್ರಪ್ರದೇಶ ರಾಜ್ಯ ಸಾರಿಗೆ ಸಂಸ್ಥೆಯ ಯಾವುದೇ ಬಸ್ಸುಗಳು ತೆಲಂಗಾಣ ಪ್ರಾಂತ್ಯದಲ್ಲಿ ರಸ್ತೆಗಿಳಿದಿಲ್ಲ. ಅಂಗಡಿ-ಮಳಿಗೆಗಳು, ವ್ಯಾಪಾರಿ ಸಂಸ್ಥೆಗಳು, ಶಾಲಾ-ಕಾಲೇಜುಗಳೆಲ್ಲ ಬಂದ್‌ಗೆ ಸಂಪೂರ್ಣವಾಗಿ ಸಹಕರಿಸಿವೆ.
ಬಂದ್‌ಗೆ ಕಾಂಗ್ರೆಸ್, ತೆಲುಗು ದೇಶಂ ಪಕ್ಷ, ಬಿಜೆಪಿ ಮತ್ತು ಟಿಆರ್ಎಸ್ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಕೂಡ ಬೆಂಬಲ ನೀಡಿವೆ. ಆದರೆ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಬಾರದು ಎಂದು ಇದೇ ಸಂದರ್ಭದಲ್ಲಿ ಈ ಎಲ್ಲಾ ಪಕ್ಷಗಳನ್ನೊಳಗೊಂಡ ಜಂಟಿ ಕ್ರಿಯಾ ಸಮಿತಿಯು ಮನವಿ ಮಾಡಿಕೊಂಡಿದೆ.
ಪ್ರತ್ಯೇಕ ತೆಲಂಗಾಣ ಆಗ್ರಹಿಸಿ ನಡೆಯುತ್ತಿರುವ ಹಿಂಸಾಚಾರ ಪರಿಸ್ಥಿತಿಯನ್ನು ನಿಭಾಯಿಸಲು ಹೆಚ್ಚುವರಿ ಪಡೆಗಳನ್ನು ಆಂಧ್ರಪ್ರದೇಶ ನಿಯೋಜಿಸಿದ್ದರೂ ಕೂಡ ಹರಿದು ಬರುತ್ತಿರುವ ಜನಸಾಗರವನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಜನತೆ ಹಿಂಸಾಚಾರ ನಿರತರಾದರೂ ಏನೂ ಮಾಡಲಾಗದ ಸ್ಥಿತಿಯಲ್ಲಿದ್ದಾರೆ ಪೊಲೀಸರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.