ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮರಾಠಿ ಬಲ್ಲವರಿಗೆ ಮಾತ್ರ ಮುಂಬೈಯಲ್ಲಿ ಟ್ಯಾಕ್ಸಿ ಪರ್ಮಿಟ್! (Marathi | Mumbai | Maharashtra | taxi license)
Bookmark and Share Feedback Print
 
ಮುಂಬೈಯಲ್ಲಿ ಟ್ಯಾಕ್ಸಿ ಓಡಿಸುವ ಹೊರರಾಜ್ಯ ವಾಸಿಗಳಿಗೆ ಪ್ರಬಲ ಹೊಡೆತ ನೀಡಿರುವ ಮಹಾರಾಷ್ಟ್ರ ಸರಕಾರ, ಇನ್ನು ಮುಂದೆ ಟ್ಯಾಕ್ಸಿ ಪರವಾನಗಿ ಪಡೆಯಬೇಕಾದರೆ ಕನಿಷ್ಠ 15 ವರ್ಷ ರಾಜ್ಯದಲ್ಲಿ ವಾಸ ಮಾಡಿರಬೇಕು ಮತ್ತು ಮರಾಠಿ ಓದಲು, ಬರೆಯಲು ತಿಳಿದಿರಬೇಕು ಎಂಬ ಹೊಸ ನಿಯಮಾವಳಿಗಳನ್ನು ತಂದಿದೆ.

ಕನಿಷ್ಠ 15 ವರ್ಷ ಮಹಾರಾಷ್ಟ್ರದಲ್ಲಿ ವಾಸಿಸಿದ ಬಗ್ಗೆ ಪ್ರಮಾಣ ಪತ್ರಗಳನ್ನು ಒದಗಿಸುವ ಟ್ಯಾಕ್ಸಿ ಚಾಲಕರಿಗೆ ಮಾತ್ರ ಇನ್ನು ಮುಂದೆ ಪರವಾನಗಿ ನೀಡಲಾಗುತ್ತದೆ. ಅಲ್ಲದೆ ಅವರಿಗೆ ಮರಾಠಿ ಬರೆಯಲು ಮತ್ತು ಓದಲು ಗೊತ್ತಿರಬೇಕೆಂಬ ನಿಯಮಗಳನ್ನೂ ಸೇರಿಸಲಾಗಿದೆ. ಇಂದಿನ ಸಂಪುಟ ಸಭೆಯಲ್ಲಿ ಈ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು ಎಂದು ಮುಖ್ಯಮಂತ್ರಿಗಳ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಇಂದು ನಡೆದ ಮಹಾರಾಷ್ಟ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಪ್ರಸಕ್ತ ಮುಂಬೈಯಲ್ಲಿ ಉತ್ತರ ಪ್ರದೇಶ ಮತ್ತು ಬಿಹಾರಗಳ ವಲಸಿಗರು ಟ್ಯಾಕ್ಸಿ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ.

ಆದರೆ ಈ ನಿಯಮಾವಳಿಗಳ ಪ್ರಕಾರ ಪ್ರಸಕ್ತ ಹೊಂದಿರುವ ಪರವಾನಗಿಗಳಿಗೆ ಯಾವುದೇ ಸಮಸ್ಯೆಯಾಗದು. ನಿಯಮಾವಳಿಗಳಂತೆ ಈಗ ಹೊರ ರಾಜ್ಯಗಳ ಚಾಲಕರು ಹೊಂದಿರುವ ಟ್ಯಾಕ್ಸಿ ಪರವಾನಗಿಯನ್ನು ರದ್ದು ಮಾಡಲಾಗುವುದಿಲ್ಲ, ಅದು ಮುಂದುವರಿಯುತ್ತದೆ. ಆದರೆ ಹೊಸ ಪರ್ಮಿಟ್‌ಗಳನ್ನು ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಸರಕಾರದ ನಿರ್ಧಾರವನ್ನು ಬಾಂಬೆ ಟ್ಯಾಕ್ಸಿ ಅಸೋಸಿಯೇಷನ್ ಖಂಡಿಸಿದೆ. ಮುಂಬೈ ಕಾಸ್ಮೋಪಾಲಿಟನ್ ನಗರವಾಗಿದ್ದ ಹೊರತಾಗಿಯೂ ಹೊರಗಿನವರಿಗೆ ಯಾಕೆ ಅನುಮತಿ ನಿರಾಕರಿಸಲಾಗುತ್ತದೆ ಎಂದು ಅಸೋಸಿಯೇಷನ್ ಕಾರ್ಯದರ್ಶಿ ಎ.ಎಲ್. ಕ್ವಾರ್ಡೋಸ್ ಪ್ರತಿಕ್ರಿಯಿಸಿದ್ದಾರೆ.

ಶಿವಸೇನೆ ಮತ್ತು ಮಹಾರಾಷ್ಟ್ರ ನವನಿರ್ಮಾಣ ವೇದಿಕೆಗಳು ಸರಕಾರದ ನಿರ್ಧಾರವನ್ನು ಸ್ವಾಗತಿಸಿದ್ದು, ವಲಸಿಗರಿಂದಾಗಿ ಮರಾಠಿಗರು ನಿರುದ್ಯೋಗಿಗಳಾಗಿದ್ದಾರೆ; ಇದು ತಪ್ಪಬೇಕು. ರಾಜ್ಯದವರಿಗೆ ಹೆಚ್ಚಿನ ಅವಕಾಶಗಳು ಸಿಗಬೇಕು. ಇದು ಹಳೆ ಬೇಡಿಕೆಯಾಗಿದ್ದು, ಸರಕಾರ ಈಗಷ್ಟೇ ನಿರ್ಧಾರ ಕೈಗೊಂಡಿದೆ. ಆದಷ್ಟು ಶೀಘ್ರ ಇದು ಜಾರಿಯಾಗಬೇಕು ಎಂದು ಇವುಗಳು ಒತ್ತಾಯಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ