ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಜೀವ್ ಹಂತಕಿ ನಳಿನಿ ಬಿಡುಗಡೆಗೆ ತಮಿಳುನಾಡು ಒಲವು? (Rajiv Gandhi murder | Nalini Sriharan | Rajiv Gandhi | assassination case)
Bookmark and Share Feedback Print
 
ಮಾಜಿ ಫ್ರಧಾನಿ ರಾಜೀವ್ ಗಾಂಧಿ ಹಂತಕಿ ನಳಿನಿ ಶ್ರೀಹರನ್‌ಳನ್ನು ತಮಿಳುನಾಡು ಸರಕಾರ ಅವಧಿಗೆ ಮೊದಲೇ ಬಿಡುಗಡೆ ಮಾಡಲು ಒಲವು ತೋರಿಸುತ್ತಿದೆ ಎಂದು ಹೇಳಲಾಗುತ್ತಿದ್ದು, ಮೂಲಗಳ ಪ್ರಕಾರ ರಾಜ್ಯ ಸರಕಾರ ನೇಮಿಸಿದ್ದ ಸಲಹಾ ಸಮಿತಿಯು ಇಂತಹದ್ದೊಂದು ವರದಿಯನ್ನು ಒಪ್ಪಿಸಲಿದೆ.

ಜೈಲಿನಲ್ಲಿರುವ ನಳಿನಿಯದ್ದು ಸಭ್ಯ ನಡತೆ. ಈಗಾಗಲೇ 19 ವರ್ಷ ಕಾರಾಗೃಹದಲ್ಲಿ ಕಳೆದಿರುವ ಆಕೆ ಈ ಅಂಶವನ್ನೂ ಖೈದಿಗಳ ಸಲಹಾ ಸಮಿತಿಯು ಗಣನೆಗೆ ತೆಗೆದುಕೊಂಡಿದೆ. ಹೆಣ್ಣು ಮಗುವೊಂದನ್ನು ಹೊಂದಿರುವ ನಳಿನಿ ಗಂಡ ಮುರುಗನ್ ಇದೇ ಪ್ರಕರಣದಲ್ಲಿ ಮರಣದಂಡನೆ ಎದುರಿಸುತ್ತಿರುವ ಕಾರಣ ಅನುಕಂಪವನ್ನೂ ಪರಿಗಣಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ.
Rajiv Gandhi
PTI


ಸಲಹಾ ಸಮಿತಿಯು ತನ್ನ ಶಿಫಾರಸನ್ನು ಗುರುವಾರ ರಾಜ್ಯ ಸರಕಾರಕ್ಕೆ ಸಲ್ಲಿಸುವ ನಿರೀಕ್ಷೆಗಳಿವೆ. ಈ ವರದಿ ಶಿಫಾರಸು ರೂಪದಲ್ಲಿರುವುದರಿಂದ ಸರಕಾರ ಸ್ವೀಕರಿಸುವ ಅಥವಾ ತಳ್ಳಿ ಹಾಕುವ ಹಕ್ಕನ್ನು ಹೊಂದಿದೆ. ವರದಿ ಸ್ವೀಕರಿಸಿದ ನಂತರ ರಾಜ್ಯ ಸರಕಾರವು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ನಳಿನಿಯನ್ನು ಬಿಡುಗಡೆ ಮಾಡುವ ಸಂಬಂಧ ಕೇಂದ್ರ ಸರಕಾರದೊಂದಿಗೆ ಚರ್ಚಿಸುವ ಸಾಧ್ಯತೆಗಳಿವೆ.

ಸಿಬಿಐ ತನಿಖೆಗೊಳಪಟ್ಟಿದ್ದ ರಾಜೀವ್ ಹತ್ಯೆ ಪ್ರಕರಣದಲ್ಲಿ ನಾಲ್ವರ ಆರೋಪ ಸಾಬೀತಾಗಿದ್ದು, ಅವರು ಮರಣದಂಡನೆ ಶಿಕ್ಷೆ ಪ್ರಕಟಿಸಲಾಗಿತ್ತು. ನಂತರ ಜೀವಾವಧಿ ಶಿಕ್ಷೆಗಿಳಿಸಲ್ಪಟ್ಟಿದ್ದ ನಳಿನಿ, ತನ್ನನ್ನು ಅವಧಿಗೆ ಮೊದಲೇ ಬಿಡುಗಡೆ ಮಾಡುವಂತೆ ಹೈಕೋರ್ಟಿಗೆ ಮನವಿ ಸಲ್ಲಿಸಿದ್ದಳು. ಕೋರ್ಟ್ ಕೇಂದ್ರ ಸರಕಾರದ ಅಭಿಪ್ರಾಯ ಕೇಳಿದಾಗ, ಇದರಲ್ಲಿ ತನ್ನ ಪಾತ್ರವೇನಿಲ್ಲ; ರಾಜ್ಯ ಸರಕಾರ ತೀರ್ಮಾನಿಸಲಿ ಎಂದು ಹೇಳಿತ್ತು.

ಆದರೆ ನಳಿನಿಯ ಮನವಿಯನ್ನು 2007ರ ಅಕ್ಟೋಬರ್ 31ರಂದು ಸಲಹಾ ಸಮಿತಿಯು ಮೊದಲ ಬಾರಿ ತಿರಸ್ಕರಿಸಿತ್ತು. ಬಳಿಕ ರಾಜೀವ್ ಪುತ್ರಿ ಪ್ರಿಯಾಂಕಾ ಗಾಂಧಿ 2008ರ ಮಾರ್ಚ್ 19ರಂದು ನಳಿನಿಯನ್ನು ರಹಸ್ಯವಾಗಿ ವೆಲ್ಲೋರ್ ಜೈಲಿನಲ್ಲಿ ಭೇಟಿಯಾಗಿದ್ದರು. ಈ ಸಂದರ್ಭದಲ್ಲಿ ಪ್ರಿಯಾಂಕಾರವರು ನಳಿನಿಯನ್ನು ಕ್ಷಮಿಸಿದ್ದಾರೆ ಎಂಬ ವರದಿಗಳೂ ಬಂದಿದ್ದವು.

ನಂತರ ಸಲಹಾ ಸಮಿತಿಯ ನಿರ್ಧಾರವನ್ನು ಮದ್ರಾಸ್ ಹೈಕೋರ್ಟಿನಲ್ಲಿ ನಳಿನಿ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ್ದಳು. ಆಗ ಹೊಸ ಸಮಿತಿಯನ್ನು ರಚಿಸುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿದ್ದ ನ್ಯಾಯಾಲಯ, ಆಕೆಯ ಬಿಡುಗಡೆಗೆ ಕಾನೂನಿನಡಿಯಲ್ಲಿ ಅವಕಾಶಗಳಿವೆಯೇ ಎಂದು ಪರಿಶೀಲಿಸುವಂತೆ ಸೂಚಿಸಿತ್ತು.

1991ರ ಜೂನ್ 14ರಂದು ಬಂಧಿತಳಾಗಿದ್ದ ನಳಿನಿಗೆ ಇತರ 25 ಆರೋಪಿಗಳೊಂದಿಗೆ ವಿಶೇಷ ನ್ಯಾಯಾಲಯವು 1998ರ ಜನವರಿ 28ರಂದು ಮರಣದಂಡನೆ ವಿಧಿಸಿತ್ತು. ಆದರೆ ಸುಪ್ರೀಂ ಕೋರ್ಟ್ 1999ರ ಮೇ 11ರಂದು ನಳಿನಿ ಸೇರಿದಂತೆ ಕೇವಲ ನಾಲ್ಕು ಮಂದಿಗೆ ಮಾತ್ರ ಮರಣದಂಡನೆ ವಿಧಿಸಿತು. ಬಳಿಕ ತಮಿಳುನಾಡು ರಾಜ್ಯಪಾಲರು ನಳಿನಿ ಅನುಕಂಪದ ಆಧಾರದಲ್ಲಿ ಕ್ಷಮಾದಾನ ನೀಡಬೇಕೆಂದು ಕೋರಿದ ಹಿನ್ನೆಲೆಯಲ್ಲಿ ಆಕೆಯ ಶಿಕ್ಷೆಯನ್ನು ಜೀವಾವಧಿಗೆ ಇಳಿಸಲಾಗಿತ್ತು.

ಪ್ರಧಾನಿಯಾಗಿದ್ದ ರಾಜೀವ್ ಅವರನ್ನು ತಮಿಳುನಾಡಿನ ಶ್ರೀಪೆರಂಬೂರ್ ಎಂಬಲ್ಲಿ 1991ರ ಮೇ 21ರಂದು ಆತ್ಮಹತ್ಯಾ ಬಾಂಬರ್ ಮೂಲಕ ಹತ್ಯೆ ಮಾಡಲಾಗಿತ್ತು. ಶ್ರೀಲಂಕಾ ತಮಿಳರಿಗೆ ರಾಜೀವ್ ಅಡ್ಡಗಾಲಾಗಿದ್ದರು ಎಂದು ಆರೋಪಿಸಿ ಎಲ್‌ಟಿಟಿಇ ಈ ಕೃತ್ಯ ನಡೆಸಿತ್ತು.
ಸಂಬಂಧಿತ ಮಾಹಿತಿ ಹುಡುಕಿ