ಇಬ್ಬರು ಶಂಕಿತರು ಅಡಗಿದ್ದಾರೆ ಎಂಬ ಸುಳಿವಿನ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮದರಸಾದೊಳಗೆ ಹುಡುಕಾಟ ನಡೆಸಿದ ಪೊಲೀಸರ ವಿರುದ್ಧ ಮುಸ್ಲಿಮರು ಭಾರೀ ಪ್ರತಿಭಟನೆ ನಡೆಸಿ ಪರಿಣಾಮ ಆರು ಮಂದಿ ಪೊಲೀಸರನ್ನು ಅಮಾನತು ಮಾಡಲಾಗಿದೆ.
ಬಿಜ್ನೂರ್ ಜಿಲ್ಲಾ ಕೇಂದ್ರದಿಂದ 35 ಕಿಲೋ ಮೀಟರ್ ದೂರದಲ್ಲಿರುವ ನೆಹ್ರೂರ್ ಎಂಬಲ್ಲಿನ 'ಜಾಮಿಯಾ ಅರೇಬಿಯಾ ಖಾಸಿಂ ಉಲ್ ಉಲಂ' ಮದರಸಾದಲ್ಲಿ ಇಬ್ಬರು ಶಂಕಿತ ವ್ಯಕ್ತಿಗಳಿದ್ದಾರೆ ಎಂಬ ದೂರವಾಣಿ ಕರೆಯನ್ನು ಪೊಲೀಸರು ಸ್ವೀಕರಿಸಿದ್ದರು.
ಕರೆಯ ಜಾಡನ್ನು ಅನುಸರಿಸಿದ ಸ್ಥಳೀಯ ಪೊಲೀಸರು ಇನ್ಸ್‌ಪೆಕ್ಟರ್ ಸತ್ಯಪಾಲ್ ಶರ್ಮಾ ನೇತೃತ್ವದಲ್ಲಿ ಸ್ಥಳಕ್ಕೆ ಧಾವಿಸಿ, ಮದರಸಾದಲ್ಲಿ ಪರಿಶೀಲನೆ ನಡೆಸಿದ್ದರು.
ಈ ಸಂದರ್ಭದಲ್ಲಿ ಮದರಸಾ ಮ್ಯಾನೇಜರ್ ಮುಫ್ತಿ ಮೊಹಮ್ಮದ್ ಆರಿಫ್ ಕಾಸ್ಮಿ ಮತ್ತು ಸಿಬ್ಬಂದಿಗಳು ಪೊಲೀಸ್ ಕಾರ್ಯಾಚರಣೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೂ ಪೊಲೀಸರು ಪರಿಶೀಲನೆ ನಡೆಸಿದ್ದರು ಎಂದು ಮೂಲಗಳು ಹೇಳಿವೆ.
ಮದರಸಾಕ್ಕೆ ದಾಳಿ ನಡೆದಿರುವ ಸುದ್ದಿ ಕಾಡ್ಗಿಚ್ಚಿನಂತೆ ಪಟ್ಟಣದಲ್ಲಿ ಹಬ್ಬಿದ ಬಳಿಕ ನೂರಾರು ಮುಸ್ಲಿಮರು ಗುಂಪುಗೂಡಿ ಪೊಲೀಸರ ವಿರುದ್ಧ ಪ್ರತಿಭಟನೆ ನಡೆಸಿದರು. ಇಲ್ಲಿನ ಏಜೆನ್ಸಿ ಚೌಕ್ ಎಂಬಲ್ಲಿ ರಸ್ತೆ ತಡೆ ನಡೆಸಿದ ಆಕ್ರೋಶಿತರು ಪೊಲೀಸ್ ಇಲಾಖೆ ವಿರುದ್ಧ ಘೋಷಣೆಗಳನ್ನು ಕೂಗಿದ್ದಲ್ಲದೆ, ಮದರಸಾಕ್ಕೆ ದಾಳಿ ನಡೆಸಿದ ಪೊಲೀಸರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿದ್ದರು.
ಆರು ಪೊಲೀಸರ ಅಮಾನತು... ಸ್ಥಳೀಯಾಡಳಿತದ ಪೂರ್ವಾನುಮತಿ ಪಡೆಯದೆ ಮದರಸಾಕ್ಕೆ ದಾಳಿ ನಡೆಸಿದ ಪೊಲೀಸರ ವಿರುದ್ಧ ಇಲಾಖೆ ತಕ್ಷಣವೇ ಕ್ರಮ ಕೈಗೊಂಡಿದ್ದು, ನೆಹ್ರೂರ್ ಪೊಲೀಸ್ ಠಾಣಾ ಮುಖ್ಯಸ್ಥರು ಸೇರಿದಂತೆ ಆರು ಮಂದಿಯನ್ನು ಅಮಾನತುಗೊಳಿಸಲಾಗಿದೆ.
ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತದ ಪೂರ್ವಾನುಮತಿ ಪಡೆಯದೆ ದಾಳಿ ನಡೆಸಿದ ನೆಹ್ರೂರ್ ಇನ್ಸ್‌ಪೆಕ್ಟರ್ ಸತ್ಯಪಾಲ್ ಶರ್ಮಾ ಮತ್ತು ಇತರ ಐವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಬಿಜ್ನೂರ್ ಪೊಲೀಸ್ ವರಿಷ್ಠಾಧಿಕಾರಿ ರಾಜ್ ಕುಮಾರ್ ತಿಳಿಸಿದ್ದಾರೆ.