ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮುಖ್ಯಮಂತ್ರಿಗಳ ಸಭೆಗೆ ಬರಲ್ಲ: ಪ್ರಧಾನಿಗೆ ಮಾಯಾ ಬೆದರಿಕೆ
(Union Agriculture Minister | Sharad Pawar | Mayawati | Price rice)
ಬೆಲೆಯೇರಿಕೆ ಕುರಿತಂತೆ ಯದ್ವಾತದ್ವಾ ಹೇಳಿಕೆ ನೀಡುತ್ತಿರುವ ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಅವರನ್ನು ಸಂಪುಟದಿಂದ ಕಿತ್ತೊಗೆಯದಿದ್ದರೆ ಮುಖ್ಯಮಂತ್ರಿಗಳ ಸಭೆಗೆ ನಾನು ಬರಲ್ಲ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಮಾಯಾವತಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಬೆದರಿಕೆ ಹಾಕಿದ್ದಾರೆ.
ಹಾಲು ಮತ್ತು ಕ್ಷೀರೋತ್ಪನ್ನಗಳ ಬೆಲೆ ಮುಂದಿನ ದಿನಗಳಲ್ಲಿ ಏರಿಕೆಯಾಗಲಿದೆ ಎಂದು ಪವಾರ್ ಹೇಳಿದ್ದಾರೆ. ಇಂತಹ ಬೇಜವಾಬ್ದಾರಿಯುತ ಹೇಳಿಕೆಗಳನ್ನು ಹಿರಿಯ ಸಚಿವರೊಬ್ಬರು ನೀಡುತ್ತಿರುವುದು ದುರದೃಷ್ಟಕರ. ಆ ಮೂಲಕ ಅಕ್ರಮ ದಾಸ್ತಾನುದಾರರು ಮತ್ತು ಲಾಭಕೋರರಿಗೆ ಅವರು ಬೆಂಬಲ ನೀಡುತ್ತಿದ್ದಾರೆ ಎಂದು ಮಾಯಾವತಿ ತೀವ್ರವಾಗಿ ಟೀಕಿಸಿದ್ದಾರೆ.
PTI
ತಕ್ಷಣವೇ ಕೃಷಿ ಸಚಿವರನ್ನು ವಜಾಗೊಳಿಸಬೇಕೆಂದು ಮನಮೋಹನ್ ಸಿಂಗ್ ಅವರಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ. ಇಲ್ಲದೇ ಇದ್ದರೆ ಪವಾರ್ ನೀಡುತ್ತಿರುವ ಹೇಳಿಕೆಗಳಿಗೆ ಪ್ರಧಾನ ಮಂತ್ರಿಗಳ ಒಪ್ಪಿಗೆಯಿದೆ ಎಂದು ತಿಳಿದುಕೊಳ್ಳಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.
ಅಲ್ಲದೆ ಜನವರಿ 27ಕ್ಕೂ ಮೊದಲು ಪವಾರ್ ಅವರನ್ನು ಸಚಿವ ಸ್ಥಾನದಿಂದ ತೆಗೆಯದಿದ್ದರೆ ಪ್ರಧಾನಿಯವರು ಬೆಲೆಯೇರಿಕೆ ಕುರಿತು ಕರೆದಿರುವ ಮುಖ್ಯಮಂತ್ರಿಗಳ ಸಭೆಗೆ ನಾನು ಹಾಜರಾಗುವುದಿಲ್ಲ ಎಂದು ಮಾಯಾವತಿ ಬೆದರಿಕೆಯನ್ನೂ ಹಾಕಿದರು.
ಇಂತಹ ಬೇಜವಾಬ್ದಾರಿಯುತ ಹೇಳಿಕೆಗಳನ್ನು ಕೇಂದ್ರ ಸಚಿವರು ಮಾಧ್ಯಮಗಳಿಗೆ ನೀಡುತ್ತಿರುವ ನಡುವೆಯೇ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರವು ಬೆಲೆಯೇರಿಕೆಯ ಕುರಿತು ಚರ್ಚಿಸಲು ಸಭೆ ಕರೆದಿರುವುದು ದುರದೃಷ್ಟಕರ ಎಂದೂ ಅವರು ಹೇಳಿದ್ದಾರೆ.
ಪವಾರ್ ಬೆಲೆಯೇರಿಕೆಯ ಕುರಿತು ಇಂತಹ ಹೇಳಿಕೆಗಳನ್ನು ನೀಡುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಸಕ್ಕರೆ ಮತ್ತು ಆಹಾರ ಪದಾರ್ಥಗಳ ಬೆಲೆ ಏರಲಿದೆ ಎಂದು ಅವರು ಹೇಳಿದ ನಂತರವಷ್ಟೇ ಬೆಲೆಯೇರಿಕೆಯಾಗಿತ್ತು. ಈ ಬಾರಿ ಹಾಲಿನ ಬೆಲೆ ಹೆಚ್ಚಲಿದೆ ಎಂದಿದ್ದಾರೆ. ಅವರ ಹೇಳಿಕೆಯಿಂದಾಗಿಯೇ ಹಾಲಿನ ಬೆಲೆ ಏರಿಕೆಯಾಗುತ್ತದೆ ಎಂದು ಮಾಯಾ ಆರೋಪಿಸಿದ್ದಾರೆ.