ಅನಾರೋಗ್ಯದಿಂದ ಬಳಲುತ್ತಿರುವ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಮುಖಂಡ ಎಲ್.ಕೆ. ಅಡ್ವಾಣಿಯವರು ನೇಮಕವಾಗುವ ಸಾಧ್ಯತೆಗಳಿವೆ.
ವಾಜಪೇಯಿಯವರು ಕಳೆದ ಹಲವು ಸಮಯಗಳಿಂದ ಅಸೌಖ್ಯದಿಂದ ಬಳಲುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಹಾಗಾಗಿ ಅವರ ಸ್ಥಾನವನ್ನು ಉಳಿಸಿಕೊಂಡೇ ಇತ್ತೀಚೆಗಷ್ಟೇ ಸಂಸದೀಯ ಪಕ್ಷದ ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದ ಅಡ್ವಾಣಿಯವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗುತ್ತದೆ ಎಂದು ಬಿಜೆಪಿ ಮೂಲಗಳು ಹೇಳಿವೆ.
PTI
ಇತ್ತೀಚೆಗಷ್ಟೇ ಲೋಕಸಭೆಯ ವಿರೋಧ ಪಕ್ಷದ ನಾಯಕಿಯಾಗಿ ಆಯ್ಕೆಯಾಗಿದ್ದ ಸುಷ್ಮಾ ಸ್ವರಾಜ್ ತನಗೆಂದು ಮೀಸಲಾಗಿಟ್ಟಿರುವ ಕೊಠಡಿಗೆ ಇನ್ನಷ್ಟೇ ತೆರಳಬೇಕಿದ್ದು, ಅಡ್ವಾಣಿ ಆಯ್ಕೆಯಿಂದಾಗಿ ಸಂಸತ್ತಿನ ಕಚೇರಿಯ ಕೊಠಡಿ ಸಮಸ್ಯೆ ಕೂಡ ಪರಿಹಾರ ಕಾಣಲಿದೆ. ಇದುವರೆಗೂ ಅಡ್ವಾಣಿಯವರು ತನ್ನ ಕೊಠಡಿಯನ್ನು ಬಿಟ್ಟುಕೊಟ್ಟಿಲ್ಲ. ಅಡ್ವಾಣಿಯವರನ್ನು ಎನ್‌ಡಿಎಯ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಿದರೆ ಸಮಸ್ಯೆಗಳು ಪರಿಹಾರ ಕಾಣಲಿವೆ.
ವಾಜಪೇಯಿಯವರು ಸಾಂಕೇತಿಕವಾಗಿ ಎನ್‌ಡಿಎ ಮುಖಂಡರಾಗಿಯೇ ಮುಂದುವರಿಯುತ್ತಾರೆ. ಆದರೆ ಪ್ರಾಯೋಗಿಕ ವಿಚಾರಕ್ಕೆ ಬಂದಾಗ ಅಡ್ವಾಣಿಯವರು ಮುಖ್ಯಸ್ಥರಾಗಿ ಮುನ್ನಡೆಸುತ್ತಾರೆ. ಅಟಲ್‌ಜೀಯವರ ಒಪ್ಪಿಗೆ ಪಡೆದ ನಂತರವಷ್ಟೇ ಈ ನಡೆಗೆ ಬರಲಾಗುತ್ತದೆ ಎಂದು ಬಿಜೆಪಿ ಮೂಲವೊಂದು ಹೇಳಿದೆ.
ಮುಂದಿನ ತಿಂಗಳು ನಡೆಯಲಿರುವ ಬಜೆಟ್ ಅಧಿವೇಶನಕ್ಕೂ ಮೊದಲು ಎನ್‌ಡಿಎ ಸಭೆ ನಡೆಯಲಿದ್ದು, ಅದಕ್ಕೂ ಮೊದಲು ವಾಜಪೇಯಿಯವರ ಒಪ್ಪಿಗೆಯನ್ನು ಪಡೆಯಲಾಗುತ್ತದೆ.
ಲೋಕಸಭೆಯ ಪ್ರತಿಪಕ್ಷ ಸ್ಥಾನವನ್ನು ತ್ಯಜಿಸಿದ ನಂತರ ಸಂಸದೀಯ ಪಕ್ಷದ ಅಧ್ಯಕ್ಷರಾಗಿ ಆಯ್ಕೆಗೊಳ್ಳುವುದರೊಂದಿಗೆ ಬಿಜೆಪಿ ನಿಯಂತ್ರಣ ಬಿಟ್ಟುಕೊಡದ ಅಡ್ವಾಣಿಯವರು ನಿವೃತ್ತಿ ಸಾಧ್ಯತೆಗಳನ್ನು ಪರೋಕ್ಷವಾಗಿ ತಳ್ಳಿ ಹಾಕಿದ್ದರು. ಎನ್‌ಡಿಎ ಅಧ್ಯಕ್ಷರಾಗಿ ನೇಮಕಗೊಂಡರೆ ಅಂತಹ ಸಾಧ್ಯತೆಗಳು ಸಂಪೂರ್ಣವಾಗಿ ತೆರೆಮರೆಗೆ ಸರಿಯಲಿದೆ ಎಂದು ಹೇಳಲಾಗುತ್ತಿದೆ.