ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಮತ್ತೆ ವಿಮಾನ ಅಪಹರಣ ಸಂಚು: ಭಾರತದಾದ್ಯಂತ ಕಟ್ಟೆಚ್ಚರ (HuJI commander | Amjad Khwaja | Harkat-ul-Jihad-al-Islami | Hyderabad)
Bookmark and Share Feedback Print
 
ಇತ್ತೀಚೆಗಷ್ಟೇ ಬಂಧಿತನಾಗಿದ್ದ 'ಹರ್ಕತ್ ಉಲ್ ಜಿಹಾದ್ ಅಲ್ ಇಸ್ಲಾಮಿ' ಭಯೋತ್ಪಾದಕ ಸಂಘಟನೆಯ ದಕ್ಷಿಣ ಭಾರತ ಅಗ್ರ ಕಮಾಂಡರ್ ಅಮ್ಜದ್ ಆಲಿಯಾಸ್ ಶೇಖ್ ಅಬ್ದುಲ್ ಖ್ವಾಜಾ ಏರ್ ಇಂಡಿಯಾ ವಿಮಾನಗಳನ್ನು ಅಪಹರಿಸುವ ಸಂಚುಗಳು ರೂಪುಗೊಳ್ಳುತ್ತಿವೆ ಎಂಬ ಭಯಾನಕ ರಹಸ್ಯವನ್ನು ಹೊರಗೆಡವಿದ್ದಾನೆ.

ಉಗ್ರನ ಬಾಯಿಯಿಂದ ಇಂತಹ ಮಾತುಗಳು ಹೊರಬರುತ್ತಿದ್ದಂತೆ ದಕ್ಷಿಣ ಏಷಿಯಾದಲ್ಲಿ ಹಾರಾಟ ನಡೆಸುವ ಭಾರತೀಯ ವಿಮಾನಗಳಿಗೆ ಕಟ್ಟೆಚ್ಚರ ರವಾನಿಸಲಾಗಿದ್ದು, ಬಿಗು ಭದ್ರತೆ ಹೆಚ್ಚಿಸಲಾಗಿದೆ. ದೇಶದ ಎಲ್ಲಾ ವಿಮಾನ ನಿಲ್ದಾಣಗಳೂ ಗರಿಷ್ಠ ತಪಾಸನೆಯನ್ನು ನಡೆಸಬೇಕೆಂದು ಇದೀಗ ಕೇಂದ್ರ ಗೃಹ ಸಚಿವಾಲಯವು ಆದೇಶ ನೀಡಿದೆ.

ಇಸ್ಲಾಮಿಕ್ ಮೂಲಭೂತವಾದಿ ಉಗ್ರ ಸಂಘಟನೆಗಳಾದ ಅಲ್‌ಖೈದಾ ಅಥವಾ ಲಷ್ಕರ್ ಇ ತೋಯ್ಬಾಗಳ ಜತೆ ಸೇರಿಕೊಂಡು ಈ ಹಿಂದೆ ನಡೆದಂತಹ ಕಂದಹಾರ್ ಘಟನೆಯನ್ನು ನೆನಪಿಸುವಂತಹ ಮತ್ತೊಂದು ವಿಮಾನವನ್ನು ಅಪಹರಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಭಾರತೀಯ ಪ್ರಜೆ ಖ್ವಾಜಾ ಹೈದರಾಬಾದ್ ಪೊಲೀಸರಲ್ಲಿ ಬಾಯಿ ಬಿಟ್ಟಿದ್ದಾನೆ ಎಂದು ವರದಿಗಳು ಹೇಳಿವೆ.

ಉಗ್ರರು ಭಾರತದಿಂದ ಮತ್ತು ಭಾರತಕ್ಕೆ ಬರುವ ಏರ್ ಇಂಡಿಯಾ ಅಥವಾ ಇಂಡಿಯನ್ ಏರ್‌ಲೈನ್ಸ್ ವಿಮಾನಗಳನ್ನು ಅಥವಾ ಸಾರ್ಕ್ ದೇಶಗಳಿಗೆ ಸೇರಿದ ಯಾವುದೇ ವಿಮಾನಗಳನ್ನು ಅಪಹರಿಸುವ ಗುರಿಯಿಟ್ಟುಕೊಂಡಿದ್ದಾರೆ. ಮುಂದೆ ಯಾವುದೇ ಕ್ಷಣದಲ್ಲಿ ಕೂಡ ಇಂತಹದ್ದೊಂದು ಅಪಹರಣ ನಡೆಯಬಹುದು ಎಂಬ ಭೀತಿ ವ್ಯಕ್ತಪಡಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಅಫಘಾನಿಸ್ತಾನ, ಬಾಂಗ್ಲಾದೇಶ, ಭೂತಾನ್, ಭಾರತ, ಮಾಲ್ದೀವ್ಸ್, ನೇಪಾಳ, ಪಾಕಿಸ್ತಾನ ಮತ್ತು ಶ್ರೀಲಂಕಾಗಳ ನಡುವೆ ಹಾರಾಟ ನಡೆಸುವ ಎಲ್ಲಾ ವಿಮಾನಯಾನ ಸಂಸ್ಥೆಗಳು ಜನವರಿ 31ರವರೆಗೆ ಶೇ.100ರಷ್ಟು ಸುರಕ್ಷತಾ ತಪಾಸನೆಗಳನ್ನು ಕಡ್ಡಾಯವಾಗಿ ಅನುಸರಿಸಬೇಕೆಂದು ನಾಗರಿಕ ವಾಯುಯಾನ ಭದ್ರತಾ ವಿಭಾಗವು ಇದೀಗ ಸಲಹೆ ನೀಡಿದೆ.

ಗಣರಾಜ್ಯೋತ್ಸವ ದಿನದಂದು ಹೈದರಾಬಾದ್ ಅಥವಾ ಚೆನ್ನೈ ನಗರದಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಸಂಚು ರೂಪಿಸುತ್ತಿದ್ದ ಹುಜಿ ದಕ್ಷಿಣ ಭಾರತ ಕಮಾಂಡರ್ ಹೈದರಾಬಾದ್ ನಿವಾಸಿ ಖ್ವಾಜಾನನ್ನು ಚೆನ್ನೈಯಲ್ಲಿ ಜನವರಿ 18ರಂದು ಬಂಧಿಸಲಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ