ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಗೇಮ್ಸ್ ಆಹಾರ ಪಟ್ಟಿಯಲ್ಲಿ ಗೋಮಾಂಸ; ಬಿಜೆಪಿ ಆಕ್ರೋಶ (BJP-led MCD | beef | CWG menu | Commonwealth Games)
Bookmark and Share Feedback Print
 
ಇದೇ ವರ್ಷ ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಗೇಮ್ಸ್‌ಗಾಗಿ ವಿದೇಶಿ ಪ್ರವಾಸಿಗರಿಗೆ ದೆಹಲಿ ಸರಕಾರವು ಗೋಮಾಂಸವನ್ನು ಪೂರೈಸುವ ನಿರ್ಧಾರಕ್ಕೆ ಬಂದಿರುವುದಕ್ಕೆ ಬಿಜೆಪಿ ನೇತೃತ್ವದ ದೆಹಲಿ ಮಹಾನಗರ ಪಾಲಿಕೆ ಆಕ್ರೋಶ ವ್ಯಕ್ತಪಡಿಸಿದೆ.

ಅಲ್ಲದೆ ಒಂದು ವೇಳೆ ಗೋಮಾಂಸ ಪೂರೈಕೆ ಮಾಡಿದಲ್ಲಿ ಅಂತಹ ಅಧಿಕಾರಿಗಳು ಮತ್ತು ಹೊಟೇಲುಗಳ ವಿರುದ್ಧ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಕಳೆದ ವರ್ಷದ ಜನವರಿಯಲ್ಲಿ ದೆಹಲಿ ಮಹಾನಗರ ಪಾಲಿಕೆ ಸದನ ಅಂಗೀಕರಿಸಿರುವ ಗೊತ್ತುವಳಿ ಪ್ರಕಾರ ಕಾಮನ್‌ವೆಲ್ತ್ ಗೇಮ್ಸ್ ಸಂದರ್ಭದಲ್ಲಿ ದನದ ಮಾಂಸವನ್ನು ಬಳಕೆ ಮಾಡಲು ಅವಕಾಶವಿಲ್ಲ. ದೆಹಲಿ ರಾಜ್ಯ ಸರಕಾರದ 1994ರ ದೆಹಲಿ ಪಶುಗಳ ರಕ್ಷಣಾ ಕಾಯ್ದೆಯಡಿಯಲ್ಲಿ ಇದು ಒಳಗೊಂಡಿದೆ ಎಂದು ಸದನದ ಮುಖ್ಯಸ್ಥ ಸುಭಾಷ್ ಆರ್ಯ ತಿಳಿಸಿದ್ದಾರೆ.

ಈ ಕಾನೂನನ್ನು ಪಾಲಿಸದೇ ಇದ್ದಲ್ಲಿ ಬಿಜೆಪಿಯ ನಗರಪಾಲಿಕೆ ಸದಸ್ಯರು ಮತ್ತು ಬೆಂಬಲಿಗರು ತೀವ್ರ ಪ್ರತಿಭಟನೆ ನಡೆಸಲಿದ್ದಾರೆ ಹಾಗೂ ಗೋಮಾಂಸವನ್ನು ಆಮದು ಮಾಡಿಕೊಳ್ಳುವ ಅಥವಾ ಪೂರೈಸುವ ಹೊಟೇಲುಗಳು ಅಥವಾ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಭಾರತದ ಕಾನೂನಿನ ಪ್ರಕಾರ ಗೋಹತ್ಯೆ ಅಥವಾ ಗೋಮಾಂಸವನ್ನು ಆಮದು ಮಾಡಿಕೊಳ್ಳುವುದು ನಿಷಿದ್ಧ.

ನಾವು ಭಾರತೀಯರು ಯೂರೋಪಿಯನ್ ಅಥವಾ ಆಸ್ಟ್ರೇಲಿಯಾಗಳಿಗೆ ಹೋದಾಗ ಉಪ್ಪಿನಕಾಯಿ ಅಥವಾ ಕ್ಷೀರೋತ್ಪನ್ನಗಳನ್ನು ಕೊಂಡೊಯ್ಯಲು ಅವಕಾಶ ನೀಡುವುದಿಲ್ಲ. ಅತ್ಯುತ್ತಮವಾಗಿರುವ ಆಪಲ್ ಇಟ್ಟುಕೊಂಡರೂ ಅದನ್ನು ವಿಮಾನ ನಿಲ್ದಾಣದಲ್ಲೇ ಕಿತ್ತುಕೊಂಡು ದೂರ ಎಸೆಯಲಾಗುತ್ತದೆ. ಹಾಗಾಗಿ ನಾವು ನಮ್ಮ ದೇಶದ ಜನರ ಭಾವನೆಗಳನ್ನು ಗೌರವಿಸುವ ಸಲುವಾಗಿ ಗೋಮಾಂಸ ಆಮದಿಗೆ ಅವಕಾಶ ನೀಡದಿದ್ದರೆ ಅದೇನೂ ಪ್ರಮಾದವಾಗದು ಎಂದು ಆರ್ಯ ಅಭಿಪ್ರಾಯಪಟ್ಟಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್ ಪ್ರವಾಸಿಗರಿಗೆ ನೀಡಲಾಗುವ ಆಹಾರ ಪಟ್ಟಿಯಲ್ಲಿ ಗೋಮಾಂಸವನ್ನೂ ಕಳೆದ ವರ್ಷ ದೆಹಲಿ ಸರಕಾರದ ಅಧಿಕಾರಿಗಳು ಸೇರಿಸಿದ್ದರು. ಆದರೆ ಕಾನೂನಿಗಿಂತ ಯಾರೂ ಮಿಗಿಲಲ್ಲ. ಹಾಗಾಗಿ ತಪ್ಪಿತಸ್ಥರನ್ನು ಶಿಕ್ಷಿಸಲು ನಾವು ಸಾಧ್ಯವಿರುವ ಎಲ್ಲಾ ಅಧಿಕಾರವನ್ನೂ ಪ್ರಯೋಗಿಸಲಿದ್ದೇವೆ. ಗೋಮಾಂಸವನ್ನು ನೀಡುತ್ತಿರುವ ಯಾವುದೇ ಹೊಟೇಲು ಅಥವಾ ಇನ್ನಿತರ ಮೂಲಗಳಿಗೆ ನಾವು ನೊಟೀಸ್ ನೀಡುತ್ತೇವೆ ಎಂದು ಸ್ಥಾಯಿ ಸಮಿತಿ ಅಧ್ಯಕ್ಷ ರಾಮ್ ಕಿಶನ್ ಸಿಂಘಾಲ್ ಹೇಳಿದ್ದಾರೆ.

ಈ ಸಂಬಂಧ ದೆಹಲಿ ರಾಜ್ಯಪಾಲ ತೇಜೇಂದ್ರ ಖನ್ನಾ ಅವರಿಗೆ ಪತ್ರ ಬರೆದಿರುವ ಆರ್ಯ, ಭಾರತದ ಕೋಟ್ಯಂತರ ಜನತೆಯ ಭಾವನೆಗಳನ್ನು ಗೌರವಿಸುವ ಸಲುವಾಗಿ ಗೋಮಾಂಸದ ಆಮದನ್ನು ನಿಷೇಧಿಸುವುದನ್ನು ಪರಿಗಣಿಸಬೇಕು ಮತ್ತು ಈ ಕುರಿತು ಕಾಮನ್‌ವೆಲ್ತ್ ಗೇಮ್ಸ್ ಸಮಿತಿಗೆ ಸೂಚನೆ ನೀಡಬೇಕು ಎಂದು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ