ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಜನನ ಪ್ರಮಾಣ ಪತ್ರ ಕೇಳಿದ್ದಕ್ಕೆ ಮರಣದ್ದನ್ನೇ ಕೊಟ್ಟರು..!
(School boy | birth certificate | death certificate | K Muhammad)
ತಿರುವನಂತಪುರಂ, ಶುಕ್ರವಾರ, 22 ಜನವರಿ 2010( 10:22 IST )
ಬದುಕಿದ್ದಾಗಲೇ ಮರಣ ಪ್ರಮಾಣ ಪತ್ರವನ್ನು ನೀಡುವ ಮೂಲಕ ಕೇರಳದ ತಿರುವನಂತಪುರಂ ನಗರಪಾಲಿಕೆ ಬಾಲಕನೊಬ್ಬನನ್ನು ಜೀವಂತವಾಗಿ ಕೊಂದು ಹಾಕಿರುವ ಅಪರೂಪದ ಪ್ರಸಂಗವೊಂದು ವರದಿಯಾಗಿದೆ.
ಜನನ ಪ್ರಮಾಣ ಪತ್ರ ಬೇಕೆಂದು ನಗರಪಾಲಿಕೆಗೆ ಅರ್ಜಿ ಗುಜರಾಯಿಸಿದ ಕೆಲವೇ ದಿನಗಳಲ್ಲಿ ಬಾಲಕನೊಬ್ಬ ಮರಣ ಪ್ರಮಾಣ ಪತ್ರವನ್ನು ಪಡೆಯುವ ಮೂಲಕ ಆಘಾತಕ್ಕೊಳಗಾಗಿದ್ದಾನೆ.
13ರ ಹರೆಯದ ಕೆ. ಮುಹಮ್ಮದ್ ಎಂಬ ಆರನೇ ತರಗತಿಯ ವಿದ್ಯಾರ್ಥಿ ಇತ್ತೀಚೆಗಷ್ಟೇ ತನಗೆ ಜನನ ಸರ್ಟಿಫಿಕೇಟ್ ಬೇಕೆಂದು ಇಲ್ಲಿನ ನಗರಪಾಲಿಕೆ ವ್ಯಾಪ್ತಿಗೊಳಪಡುವ ಸರಕಾರಿ ಆಸ್ಪತ್ರೆಗೆ ಅರ್ಜಿ ಸಲ್ಲಿಸಿದ್ದ. ನೀನು ಇದೇ ಆಸ್ಪತ್ರೆಯಲ್ಲಿ 1997ರಲ್ಲಿ ಹುಟ್ಟಿದ್ದು ಎಂದು ಮನೆಯವರು ಹೇಳಿದ್ದರಿಂದ ಅದೇ ಆಸ್ಪತ್ರೆಯಲ್ಲಿ ವಿದ್ಯಾರ್ಥಿ ಮನವಿ ಮಾಡಿಕೊಂಡಿದ್ದ.
ಕೆಲವೇ ದಿನಗಳಲ್ಲಿ ಪ್ರಮಾಣ ಪತ್ರವನ್ನೇನೋ ಪಾಲಿಕೆಯವರು ನೀಡಿದರು. ಆದರೆ ನೀಡಿದ್ದು, ನೀನು ಹುಟ್ಟಿದ ದಿನದಂದೇ ಸತ್ತು ಹೋಗಿದ್ದಿ ಎಂಬ ಮರಣ ಪ್ರಮಾಣ ಪತ್ರವನ್ನು.
ಪ್ರಮಾಣ ಪತ್ರದಿಂದ ಅಚ್ಚರಿಗೊಂಡ ವಿದ್ಯಾರ್ಥಿ ಮರು ಪ್ರಶ್ನೆ ಹಾಕಿದಾಗ ಆಗಿರುವ ತಪ್ಪನ್ನು ಒಪ್ಪಿಕೊಂಡ ನಗರಪಾಲಿಕೆ ಅಧಿಕಾರಿಗಳು, ಆ ವಿಭಾಗವನ್ನು ನೋಡಿಕೊಳ್ಳುತ್ತಿದ್ದ ಗುಮಾಸ್ತರಿಂದ ಈ ಪ್ರಮಾದವಾಗಿದೆ; ತಪ್ಪನ್ನು ಸರಿಪಡಿಸಿ, ನೂತನ ಪ್ರಮಾಣ ಪತ್ರವನ್ನು ನೀಡುವುದಾಗಿ ಹೇಳಿದೆ.
ನಾವು ದಿನಕ್ಕೆ 3,000ಕ್ಕೂ ಹೆಚ್ಚು ಜನನ ಅಥವಾ ಮರಣ ಪ್ರಮಾಣ ಪತ್ರಗಳಿಗಾಗಿ ಇಲ್ಲಿ ಅರ್ಜಿಗಳನ್ನು ಸ್ವೀಕರಿಸುತ್ತೇವೆ. ಇತ್ತೀಚೆಗೆ ಶಾಲೆಗಳು ವಿಶಿಷ್ಟ ಗುರುತು ಚೀಟಿಗಾಗಿ ಜನನ ಪ್ರಮಾಣ ಪತ್ರವನ್ನು ಕೇಳುತ್ತಿರುವುದರಿಂದ ಈ ಸಂಖ್ಯೆಯಲ್ಲಿ ಭಾರೀ ಹೆಚ್ಚಳವಾಗಿದೆ ಎಂದು ಅಧಿಕಾರಿಗಳು ತಮ್ಮ ಕಷ್ಟವನ್ನು ವಿವರಿಸಿದ್ದಾರೆ.