ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಸೋನಿಯಾ ಅನರ್ಹಗೊಳಿಸಿ ಎಂದವನಿಗೆ 10 ಲಕ್ಷ ರೂ. ದಂಡ!
(Delhi High Court | Congress | Sonia Gandhi | Subramanian Swamy)
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಸಂಸತ್ ಸದಸ್ಯೆ ಸ್ಥಾನವನ್ನು ಅನರ್ಹಗೊಳಿಸಬೇಕು ಎಂದು ಪದೇ ಪದೇ ನ್ಯಾಯಾಲಯದ ಮೆಟ್ಟಿಲು ಹತ್ತುತ್ತಿದ್ದ ಅರ್ಜಿದಾರರೊಬ್ಬರಿಗೆ ದೆಹಲಿ ಉಚ್ಚ ನ್ಯಾಯಾಲಯ 10 ಲಕ್ಷ ರೂಪಾಯಿಗಳ ಭಾರೀ ದಂಡ ಹೇರಿದೆ.
ಬೆಲ್ಜಿಯಂ ಸರಕಾರದಿಂದ ಅತ್ಯುನ್ನತ ಪ್ರಶಸ್ತಿಯನ್ನು ಲೋಕಸಭಾ ಸದಸ್ಯೆ ಸೋನಿಯಾ ಸ್ವೀಕರಿಸಿರುವ ಕಾರಣವನ್ನು ಮುಂದಿಟ್ಟುಕೊಂಡು ಅವರನ್ನು ಅನರ್ಹಗೊಳಿಸಬೇಕು ಪಿ. ರಾಜನ್ ಎಂಬವರು ಎರಡನೇ ಬಾರಿ ನ್ಯಾಯಾಲಯದ ಮೊರೆ ಹೋಗಿದ್ದರು.
ಅರ್ಜಿಯನ್ನು ತಳ್ಳಿ ಹಾಕಿರುವ ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಅವರನ್ನೊಳಗೊಂಡ ಪೀಠವು, ಈ ಹಿಂದೆಯೂ ಇದೇ ರೀತಿಯ ಮನವಿ ಮಾಡಿಕೊಂಡಿದ್ದರಿಂದ ಅರ್ಜಿದಾರರ ಮೇಲೆ 10 ಲಕ್ಷ ರೂಪಾಯಿಗಳ ದಂಡ ವಿಧಿಸಿತು.
2006ರ ನವೆಂಬರ್ ತಿಂಗಳಲ್ಲಿ ಸೋನಿಯಾ ಬೆಲ್ಜಿಯಂ ಸರಕಾರದಿಂದ ನಾಗರಿಕರಿಗೆ ನೀಡುವ ಎರಡನೇ ಅತ್ಯುನ್ನತ ಪ್ರಶಸ್ತಿ 'ಆರ್ಡರ್ ಆಫ್ ಲಿಯೋಪಾಲ್ಡ್' ಹಾಗೂ ಗೌರವ ಡಾಕ್ಟರೇಟ್‌ಗಳನ್ನು ಪಡೆದಿದ್ದರು. ಈ ಕುರಿತು ಚುನಾವಣಾ ಆಯೋಗ ತನಿಖೆ ನಡೆಸಿ ಅವರನ್ನು ಸಂಸದೆ ಸ್ಥಾನದಿಂದ ಅನರ್ಹಗೊಳಿಸಬೇಕೆಂದು ಹೈಕೋರ್ಟ್‌ನಲ್ಲಿ ರಾಜನ್ ಪ್ರಕರಣ ದಾಖಲಿಸಿದ್ದರು.
ಇದೇ ರೀತಿ ಜನತಾ ಪಕ್ಷದ ಅಧ್ಯಕ್ಷ ಸುಬ್ರಮಣ್ಯನ್ ಸ್ವಾಮಿಯವರ ಅರ್ಜಿಯನ್ನು ಕಳೆದ ವರ್ಷದ ಡಿಸೆಂಬರ್ 16ರಂದು ಹೈಕೋರ್ಟ್ ತಳ್ಳಿ ಹಾಕಿತ್ತು.
ಇದೇ ಸಂಬಂಧ ಚುನಾವಣಾ ಆಯೋಗಕ್ಕೆ ಬಂದಿದ್ದ ದೂರನ್ನಾಧರಿಸಿ ಸೋನಿಯಾರಿಗೆ ನೊಟೀಸ್ ನೀಡುವ ವಿಚಾರದಲ್ಲಿ ಆಗಿನ ಮುಖ್ಯ ಚುನಾವಣಾ ಆಯುಕ್ತರಾಗಿದ್ದ ಎನ್. ಗೋಪಾಲಸ್ವಾಮಿ ಮತ್ತು ನವೀನ್ ಚಾವ್ಲಾ ನಡುವೆ ಭಿನ್ನಾಭಿಪ್ರಾಯಗಳು ಮೂಡಿದ್ದನ್ನು ಸ್ಮರಿಸಬಹುದಾಗಿದೆ.
ಸೋನಿಯಾರಿಗೆ ನೊಟೀಸ್ ನೀಡುವ ಸಂಬಂಧ ಆಯುಕ್ತರುಗಳ ನಡುವೆ ಚರ್ಚೆ ನಡೆಯುತ್ತಿರುವಾಗ ಚಾವ್ಲಾ ಹೊರಗೆ ಹೋಗಿ ಕಾಂಗ್ರೆಸ್ ಮುಖಂಡರಿಗೆ ಮಾಹಿತಿ ಸೋರಿಕೆ ಮಾಡಿದ್ದರು ಎಂದು ಗೋಪಾಲಸ್ವಾಮಿ ನಂತರದ ದಿನಗಳಲ್ಲಿ ಆರೋಪಿಸಿದ್ದರು.