ತಾಲಿಬಾನ್ ಭಯೋತ್ಪಾದಕರ ಜತೆ ನಿಕಟ ಸಂಬಂಧ ಹೊಂದಿರುವ ಅಫಘಾನಿಸ್ತಾನ ಪ್ರಜೆಯೊಬ್ಬನನ್ನು ಬಿಹಾರ ಪೊಲೀಸರು ಬಂಧಿಸಿದ್ದು, ದಿನಕ್ಕೆರಡು ಕೇಜಿ ಮಾಂಸ ಹಾಗೂ ಒಂದು ಕೇಜಿ ಚಿಕನ್ ಕೊಡದಿದ್ದರೆ ಉಪವಾಸ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾನೆ.
ಗುಲಾಂ ರಸೂಲ್ ಖಾನ್ ಆಲಿಯಾಸ್ ಖಾನ್ ಮಿರ್ಜಾ ಎಂಬಾತ ಅಕ್ರಮವಾಗಿ ಬಾಂಗ್ಲಾದೇಶದೊಳಕ್ಕೆ ನುಸುಳಲು ಯತ್ನಿಸುತ್ತಿದ್ದಾಗ ಬಿಹಾರದ ಪೂರ್ಣಿಯಾ ಜಿಲ್ಲೆಯಲ್ಲಿ ಬಂಧಿಸಲಾಗಿತ್ತು. ಇದೀಗ ಪೂರ್ಣಿಯಾ ಜೈಲಿನಲ್ಲಿರುವ ಆತ, ಬೇಡಿಕೆ ಈಡೇರಿಸದಿದ್ದರೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಕಳೆದೆರಡು ದಿನಗಳಿಂದ ಜೈಲಿನಲ್ಲಿ ನೀಡುತ್ತಿರುವ ಸಸ್ಯಾಹಾರಗಳನ್ನು ಆತ ಸೇವಿಸಲು ನಿರಾಕರಿಸಿದ್ದಾನೆ. ತನಗೆ ದಿನಕ್ಕೆ ಎರಡು ಕಿಲೋ ಗ್ರಾಂ ಮಾಂಸ ಮತ್ತು ಒಂದು ಕಿಲೋ ಕೋಳಿ ಮಾಂಸ ಬೇಕೇ ಬೇಕೆಂದು ಹಠ ಮಾಡುತ್ತಿದ್ದಾನೆ. ಮಾಂಸಾಹಾರವಿಲ್ಲದೆ ಊಟ ಮಾಡೋದೇ ತನಗೆ ಗೊತ್ತಿಲ್ಲ, ಕಳೆದ ಐದು ವರ್ಷಗಳಿಂದ ಹೀಗೆ ಬೆಳೆಯುತ್ತಾ ಬಂದಿದ್ದೇನೆ ಎಂದು ಖಾನ್ ಹೇಳಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಪೊಲೀಸ್ ಇಲಾಖೆಯ ರಾಜ್ಯದ ಮುಖ್ಯಸ್ಥರಿಗೆ ಮಾಹಿತಿ ನೀಡಲಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ.
ಅದೇ ಹೊತ್ತಿಗೆ ತನಗೆ ಅಫಘಾನಿಸ್ತಾನದ ತಾಲಿಬಾನ್ ಜತೆ ತನಗೆ ಸಂಬಂಧವಿರುವುದನ್ನು ಖಾನ್ ಒಪ್ಪಿಕೊಂಡಿದ್ದಾನೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಯು.ಎಸ್. ದತ್ ತಿಳಿಸಿದ್ದಾರೆ.
ಗುಪ್ತಚರ ಮಾಹಿತಿಗಳ ಹಿನ್ನೆಲೆಯಲ್ಲಿ ಜನವರಿ 13ರಂದು ಭಾರತ-ಬಾಂಗ್ಲಾ ಗಡಿ ಪ್ರದೇಶದಲ್ಲಿ ಖಾನ್‌ನನ್ನು ಬಂಧಿಸಲಾಗಿತ್ತು. ಶಂಕಿತನಿಂದ ಪಾಕಿಸ್ತಾನಿ ಪಾಸ್‌ಪೋರ್ಟ್ ಮತ್ತು ಇತರ ಕೆಲವು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.