ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಓಟಿಗಾಗಿ ಹಣ ಕೊಟ್ಟು ಸುದ್ದಿ ಬರೆಸಿದ ಕಾಂಗ್ರೆಸ್: ಬಿಜೆಪಿ ಕಿಡಿ (paid-news syndrome | media | elections | Election Commission)
Bookmark and Share Feedback Print
 
ಇತ್ತೀಚಿನ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮುಖ್ಯಮಂತ್ರಿ ಅಶೋಕ್ ಚೌಹಾನ್ ಮಾಧ್ಯಮಗಳಿಗೆ ಹಣ ಕೊಟ್ಟು ಸುದ್ದಿ ಬರೆಸಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದು, ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಚುನಾವಣೆ ಸಂದರ್ಭ ಮಾಧ್ಯಮಗಳಲ್ಲಿ ಪ್ರಾಯೋಜಿತ ಸುದ್ದಿ ಕಾಣಿಸಿಕೊಳ್ಳುತ್ತಿರುವುದನ್ನು ಚುನಾವಣಾ ಆಯೋಗ ಕೊನೆಗೂ ಗಂಭೀರವಾಗಿ ಪರಿಗಣಿಸಿದ್ದು, ಮುಖ್ಯಮಂತ್ರಿ ಚೌಹಾನ್ ಅವರಿಗೆ ನೊಟೀಸ್ ಜಾರಿ ಮಾಡಿದೆ.

ನಾವು ಬಿಜೆಪಿಯಿಂದ ದೂರನ್ನು ಸ್ವೀಕರಿಸಿದ್ದೇವೆ. ಮುಖ್ಯಮಂತ್ರಿಯವರು ವಿವರಣೆ ನೀಡಬೇಕೆಂದು ನೊಟೀಸ್ ಕಳುಹಿಸಿದ್ದೇವೆ. ಫೆಬ್ರವರಿ ಒಂದರೊಳಗೆ ಅವರು ಇದಕ್ಕೆ ಉತ್ತರಿಸಬೇಕಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ನವೀನ್ ಚಾವ್ಲಾ ತಿಳಿಸಿದ್ದಾರೆ.

ಜನಪ್ರಿಯ ಆಂಗ್ಲ ದೈನಿಕ 'ದಿ ಹಿಂದೂ'ವಿನಲ್ಲಿ ಪಿ. ಸಾಯಿನಾಥ್ ಅವರು ಬರೆದಿದ್ದ ಲೇಖನವನ್ನು ಆಧರಿಸಿ ಬಿಜೆಪಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ. ಮೂರು ಬೇರೆ ಬೇರೆ ಪತ್ರಿಕೆಗಳಲ್ಲಿ ಮುಖ್ಯಮಂತ್ರಿ ಅಶೋಕ್ ಚೌಹಾನ್ ಅವರ ಮುಖಸ್ತುತಿ ಮಾಡುವ ಒಂದೇ ಸುದ್ದಿಯನ್ನು ಯಾವುದೇ ಅಕ್ಷರಗಳನ್ನೂ ಬದಲಾಯಿಸದೆ ಪ್ರಕಟಿಸಿರುವುದನ್ನು ತನ್ನ ಲೇಖನದಲ್ಲಿ ಪುರಾವೆ ಸಹಿತ ವಿವರಿಸಿದ್ದರು.

ಮೂರೂ ದಿನಪತ್ರಿಕೆಗಳಲ್ಲಿ ಸುದ್ದಿ ರೂಪದಲ್ಲಿ ಪ್ರಕಟಿಸಲಾಗಿತ್ತು. ಇದು ಜಾಹೀರಾತು ಅಥವಾ ಪ್ರಾಯೋಜಿತ ಸುದ್ದಿ ಎಂದೂ ಇಲ್ಲಿ ಬರೆದಿರಲಿಲ್ಲ. ಬೇರೆ ಬೇರೆ ದಿನಗಳಲ್ಲಿ ಸುದ್ದಿಗಳನ್ನು ಪ್ರಕಟಿಸಲಾಗಿದ್ದು, ಕೆಲವು ಪತ್ರಿಕೆಗಳಲ್ಲಿ ಶೀರ್ಷಿಕೆಗಳನ್ನು ಬದಲಾಯಿಸಲಾಗಿತ್ತು. ವಿಶೇಷ ಪ್ರತಿನಿಧಿ ವರದಿ ಎಂದು ಎರಡು ಪತ್ರಿಕೆಗಳು ಬರೆದುಕೊಂಡಿದ್ದರೆ, ಒಂದು ಪತ್ರಿಕೆ ಬೈಲೈನ್ ಹಾಕಿತ್ತು.

ಇದನ್ನು ಚೌಹಾನ್ ಹಣ ಕೊಟ್ಟು ಪ್ರಕಟಿಸಿದ್ದಾರೆಂದು ಬಿಜೆಪಿ ಆರೋಪಿಸಿದ್ದು, ಚುನಾವಣಾ ಆಯೋಗ ಈ ಕುರಿತು ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ದೂರು ನೀಡುವುದರ ಜತೆ ಪತ್ರಿಕೆಗಳ ಕಟ್ಟಿಂಗ್‌ಗಳನ್ನೂ ಆಯೋಗಕ್ಕೆ ಹಸ್ತಾಂತರಿಸಿದೆ.

ಪ್ರಾಯೋಜಿತ ಸುದ್ದಿಗಳು ವಿವಿಧ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಚುನಾವಣಾ ಆಯುಕ್ತರು, ಮುಖ್ಯಮಂತ್ರಿಯವರ ಉತ್ತರ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಅಲ್ಲದೆ ಈ ಸಂಬಂಧ 'ಎಡಿಟರ್ಸ್ ಗಿಲ್ಡ್' ಸಂಘಟನೆಯ ನಿಯೋಗವೊಂದರ ಜತೆ ಮಾತುಕತೆ ನಡೆಸಲಿರುವುದಾಗಿಯೂ ತಿಳಿಸಿದ್ದಾರೆ.

ಮಾಧ್ಯಮಗಳಿಗೆ ಹಣ ಕೊಟ್ಟು ಸುದ್ದಿ ಬರೆಸುವುದು ಅಥವಾ ಟೀವಿಗಳಲ್ಲಿ ಪ್ರಾಯೋಜಿತ ಸುದ್ದಿಗಳನ್ನು ಪ್ರಸಾರ ಮಾಡುವುದು ಪ್ರಜಾತಂತ್ರ ವ್ಯವಸ್ಥೆಗೆ ಅಪಚಾರ ಎಸಗಿದಂತೆ. ಪತ್ರಿಕೆ ಅಥವಾ ಮಾಧ್ಯಮಗಳ ಮೇಲೆ ನಾವು ಯಾವುದೇ ಕ್ರಮಗಳನ್ನು ಕೈಗೊಳ್ಳುವುದು ಅಸಾಧ್ಯ. ಅದಕ್ಕಾಗಿ ನಾವು ಪ್ರೆಸ್ ಕೌನ್ಸಿಲ್ ಮತ್ತು ಎಡಿಟರ್ಸ್ ಗಿಲ್ಡ್ ಸಂಘಟನೆಗಳಿಗೆ ಅಗತ್ಯ ಶಿಫಾರಸುಗಳನ್ನು ಮಾಡುತ್ತೇವೆ ಎಂದು ಚಾವ್ಲಾ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ