ಶಿವಸೇನೆಯ ಶಕ್ತಿ ಕೇಂದ್ರದಲ್ಲಿ ತಾನು ಮುಂದುವರಿಯುತ್ತಿದ್ದು, ಪ್ರಮುಖ ನಿರ್ಧಾರಗಳನ್ನು ನಾನೇ ತೆಗೆದುಕೊಳ್ಳುತ್ತಿದ್ದೇನೆ ಎಂದು ಶನಿವಾರ 84ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಕೇಸರಿ ಪಕ್ಷದ ಮುಖಂಡ ಬಾಳ್ ಠಾಕ್ರೆ ತಿಳಿಸಿದ್ದಾರೆ.
ರಾಜಕೀಯದ ರಿಮೋಟ್ ಕಂಟ್ರೋಟ್ ನನ್ನಲ್ಲೇ ಇದೆ ಮತ್ತು ಈ ರಿಮೋಟ್ ಕಂಟ್ರೋಲ್ ನನ್ನ ಕೈಯಲ್ಲೇ ಮುಂದುವರಿಯಲಿದೆ ಎಂದು ಶಿವಸೇನೆಯ ಮುಖವಾಣಿ 'ಸಾಮ್ನಾ' ಸಂಪಾದಕೀಯದಲ್ಲಿ ಅವರು ಬರೆದಿದ್ದಾರೆ.
ಐದು ವರ್ಷಗಳ ಹಿಂದೆ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಿಸಿದ್ದ ಠಾಕ್ರೆಯವರು, ತನ್ನ ಮಗ ಉದ್ಧವ್ ಠಾಕ್ರೆಗೆ ಪಕ್ಷದ ಜವಾಬ್ದಾರಿಗಳನ್ನು ಹಸ್ತಾಂತರಿಸಿದ್ದರು.
45 ವರ್ಷಗಳ ಹಿಂದೆ ನಾನು ನೆಟ್ಟಿದ್ದ ಗಿಡವೀಗ ಬಳ್ಳಿಗಳಾಗಿ ಬೆಳೆದು ನಿಂತಿದ್ದು, ದೆಹಲಿಯಲ್ಲಿ ಶಕ್ತಿಕೇಂದ್ರವನ್ನು ಹೊಂದುವಷ್ಟರ ಮಟ್ಟಿಗೆ ಪ್ರಗತಿ ಹೊಂದಿದೆ ಎಂದರು.
'ಮರಾಠಿ ಮಾನೂ'ಗಳನ್ನು ಕೇಂದ್ರೀಕರಿಸಿರುವ ನಮ್ಮ ನಿಲುವುಗಳು ಇದೇ ರೀತಿ ಮುಂದುವರಿಯಲಿವೆ ಎಂಬುದನ್ನೂ ಠಾಕ್ರೆ ಒತ್ತು ಹೇಳಿದ್ದಾರೆ.
ಇದೇ ಪತ್ರಿಕೆಯಲ್ಲಿ ಶಿವಸೈನಿಕರಿಗೆ ಬರೆದಿರುವ ಪತ್ರವೊಂದರಲ್ಲಿ ಠಾಕ್ರೆ, ವಯಸ್ಸಾಗಿರುವುದರಿಂದ ನನಗೆ ಈ ಹಿಂದೆ ಇದ್ದಂತೆ ಶಕ್ತಿ ಈಗಿಲ್ಲ; ಈಗಷ್ಟೇ ಅನಾರೋಗ್ಯದಿಂದ ಸುಧಾರಿಸಿಕೊಂಡಿದ್ದೇನೆ. ಹಾಗಾಗಿ ನಿಮ್ಮನ್ನು ಮಾತೋಶ್ರೀಯಲ್ಲಿ ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ. ಆದರೆ ನಿಮ್ಮ ಹೃದಯಕಕ್ಕೆ ತೀರಾ ಹತ್ತಿರದಲ್ಲಿದ್ದೇನೆ. ನಿಮಗೆ ಉದ್ಧವ್ ಇದ್ದಾನೆ. ಆತ ನಿಮ್ಮನ್ನು ಮಾತೋಶ್ರೀಯಲ್ಲಿ ಸ್ವಾಗತಿಸುತ್ತೇನೆ ಎಂದಿದ್ದಾರೆ.