ಭಾರತ-ಪಾಕಿಸ್ತಾನಗಳ ನಡುವಿನ ಕಾಶ್ಮೀರದ ನಿಯಂತ್ರಣ ರೇಖೆಯುದ್ದಕ್ಕೂ ನುಸುಳುವಿಕೆ ಯತ್ನಗಳು ನಡೆಯುತ್ತಿದ್ದು, ಮತ್ತಷ್ಟು ದಾಳಿಗಳು ದೇಶದ ಮೇಲೆ ನಡೆಯುವ ಸಾಧ್ಯತೆಗಳಿವೆ. ಆದರೆ ಭಯೋತ್ಪಾದಕರ ಯಾವುದೇ ಕೃತ್ಯಗಳನ್ನು ಸಮರ್ಥವಾಗಿ ಎದುರಿಸಲು ನಮ್ಮ ಶಸ್ತ್ರಾಸ್ತ್ರ ಪಡೆಗಳು ಸಿದ್ಧ ಎಂದು ರಕ್ಷಣಾ ಸಚಿವ ಎ.ಕೆ. ಆಂಟನಿ ಶನಿವಾರ ತಿಳಿಸಿದ್ದಾರೆ.
ಕಳೆದೆರಡು ತಿಂಗಳುಗಳ ಅವಧಿಯಲ್ಲಿ ಕಾಶ್ಮೀರದೊಳಕ್ಕೆ ನುಸುಳಲು ಯತ್ನಿಸುವ ಭಯೋತ್ಪಾದಕರ ಸಂಖ್ಯೆ ಹೆಚ್ಚಿದೆ. ನಮ್ಮ ದೇಶದ ವಿರುದ್ಧ ವೈರಿಗಳ ಈ ಕೃತ್ಯ ಸದ್ಯದ ಮಟ್ಟಿಗೆ ಮುಂದುವರಿಯುವ ಸಾಧ್ಯತೆಗಳಿವೆ. ಆದರೂ ಕಾಶ್ಮೀರದಲ್ಲಿ ಪರಿಸ್ಥಿತಿ ಸುಧಾರಿಸುತ್ತಿದ್ದು, ಅದನ್ನು ತಡೆಯಲು ದುಷ್ಕರ್ಮಿಗಳಿಗೆ ಸಾಧ್ಯವಿಲ್ಲ ಎಂದು ಆಂಟನಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.
ಟ್ರಾನ್ಸಪರೆನ್ಸಿ ಇಂಟರ್‌ನ್ಯಾಷನಲ್ ಎಂಬ ಸರಕಾರೇತರ ಸಂಸ್ಥೆ ಆಯೋಜಿಸಿದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಬಳಿಕ ಅವರು, ಭಯೋತ್ಪಾದಕ ದಾಳಿಗಳು ಮತ್ತು ನುಸುಳುಕೋರರ ಯತ್ನಗಳನ್ನು ತಡೆಯಲು ಭಾರತ ಸಿದ್ಧವಾಗಿದೆ. ಅಂತಹ ಕೃತ್ಯಗಳನ್ನು ನಮ್ಮ ಶಸ್ತ್ರಾಸ್ತ್ರ ಪಡೆಗಳು ಪ್ರತಿತಂತ್ರ ಹೆಣೆದು ಸದೆಬಡಿಯಲಿವೆ ಎಂಬ ಭರವಸೆ ನಮಗಿದೆ ಎಂದರು.
ಈ ತಿಂಗಳ ಆರಂಭದಲ್ಲಿ ಕಾಶ್ಮೀರಕ್ಕೆ ಭೇಟಿ ನೀಡಿದ್ದ ರಕ್ಷಣಾ ಸಚಿವರು, ಕಣಿವೆಯಲ್ಲಿನ ಭದ್ರತಾ ವ್ಯವಸ್ಥೆಗಳನ್ನು ಪರಿಶೀಲಿಸಿದ್ದರು.
ಭದ್ರತಾ ತಪಾಸಣೆ ನಡೆಸಿದ ನಂತರ ಹೇಳಿಕೆ ನೀಡಿದ್ದ ಆಂಟನಿ, ಇಲ್ಲಿನ ಶಾಂತಿ ಮತ್ತು ಸುವ್ಯವಸ್ಥೆಯಲ್ಲಿ ಸ್ಥಳೀಯ ಪೊಲೀಸರಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗುತ್ತದೆ ಎಂದಿದ್ದರು.
ಕಳೆದ ವರ್ಷ ಜಮ್ಮು-ಕಾಶ್ಮೀರದಿಂದ ಸುಮಾರು 30,000ದಷ್ಟು ಶಸ್ತ್ರಾಸ್ತ್ರ ಪಡೆಗಳನ್ನು ವಾಪಸ್ ಕರೆಸಿಕೊಳ್ಳಲಾಗಿತ್ತು.