ಕಾಂಗ್ರೆಸ್ ಹಿರಿಯ ಮುಖಂಡ ಅರ್ಜುನ್ ಸಿಂಗ್ ಅವರಿಗೆ ಕಳೆದ ರಾತ್ರಿ ತೀವ್ರ ಎದೆನೋವು, ಜಠರ ನೋವು ಮತ್ತು ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಏಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈಗ ಆರೋಗ್ಯ ಸುಧಾರಿಸಿದೆ ಎಂದು ಮೂಲಗಳು ಹೇಳಿವೆ.
ಶೀತ ಮತ್ತು ಜ್ವರದಿಂದ ಬಳಲುತ್ತಿದ್ದ 79ರ ಹರೆಯದ ಮಾಜಿ ಕೇಂದ್ರ ಸಚಿವರು ಎದೆನೋವಿಗೊಳಗಾದಾಗ ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಹೃದಯ ಮತ್ತು ಇತರ ಕೆಲವು ಸಮಸ್ಯೆಗಳಿಂದ ಬಳಲುತ್ತಿದ್ದರು ಎಂದು ಏಮ್ಸ್ ವೈದ್ಯ ಡಾ. ರಣದೀಪ್ ಗುಲಾರಿಯಾ ತಿಳಿಸಿದ್ದಾರೆ.
PTI
ಅವರನ್ನು ವೈದ್ಯರುಗಳ ತಂಡ ತಪಾಸಣೆ ನಡೆಸುತ್ತಿದೆ. ಪ್ರಸಕ್ತ ಅವರ ಆರೋಗ್ಯ ಸ್ಥಿರವಾಗಿದ್ದರೂ ಕೆಲವು ದಿನಗಳ ಕಾಲ ಆಸ್ಪತ್ರೆಯಲ್ಲೇ ಉಳಿದುಕೊಳ್ಳಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಕಳೆದ ಯುಪಿಎ ಸರಕಾರದಲ್ಲಿ ಮಾನವ ಸಂಪನ್ಮೂಲಾಭಿವೃದ್ಧಿ ಸಚಿವರಾಗಿದ್ದ ಸಿಂಗ್ ಅವರಿಗೆ ಹಲವು ತಪಾಸಣೆಗಳನ್ನು ನಡೆಸಲಾಗಿದೆ. ಅದರ ಫಲಿತಾಂಶಗಳಿಗೆ ಕಾಯುತ್ತಿದ್ದೇವೆ. ಆದರೂ ಅವರ ಪ್ರಮುಖ ಅಂಗಾಂಗಗಳು ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ವೈದ್ಯಕೀಯ ವಿಭಾಗ ತಿಳಿಸಿದೆ.
ಎದೆನೋವು ಪುನರಾವರ್ತನೆಯಾಗಿಲ್ಲ. ಜಠರ ನೋವೂ ಕಡಿಮೆಯಾಗಿದೆ. ಇತರ ಸಣ್ಣಪುಟ್ಟ ಸಮಸ್ಯೆಗಳಿವೆ. ಶೀಘ್ರದಲ್ಲೇ ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಲಿದ್ದಾರೆ ಎಂದು ಮೂಲಗಳು ಹೇಳಿವೆ.