ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಹುಲ್ ಕಾಲೇಜು ರಾಜಕೀಯ; ವಿವಾದಕ್ಕೀಗ ಗೋವಾ ಸರದಿ (Rahul Gandhi | Goa varsity visit | Goa | S.S. Sidhu)
Bookmark and Share Feedback Print
 
ಕಾಲೇಜುಗಳಲ್ಲಿ ರಾಹುಲ್ ಗಾಂಧಿ ರಾಜಕೀಯ ಭಾಷಣ ಮಾಡಿದ್ದಾರೆಂದು ಆರೋಪಿಸಿ ಯುನಿವರ್ಸಿಟಿಗಳಿಗೆ ಮಧ್ಯಪ್ರದೇಶ ಸರಕಾರ ನೊಟೀಸ್ ನೀಡಿದ ಬೆನ್ನಿಗೆ ಗೋವಾದಲ್ಲೂ ಅಂತಹುದೇ ವಿವಾದ ಸೃಷ್ಟಿಯಾಗಿದ್ದು, ರಾಜ್ಯಪಾಲರು ಮಧ್ಯಪ್ರವೇಶಿಸಿದ್ದಾರೆ.

ರಾಹುಲ್ ತನ್ನ ಇತ್ತೀಚಿನ ಗೋವಾ ಪ್ರವಾಸದ ಸಂದರ್ಭದಲ್ಲಿ ಕಾಲೇಜು ಕ್ಯಾಂಪಸ್ಸುಗಳಲ್ಲಿ ಕಾಂಗ್ರೆಸ್ ಸಭೆ ನಡೆಸಿದ್ದರು ಎಂದು ಆರೋಪಿಸಿ ಬಿಜೆಪಿ ಮತ್ತಿತರ ಪಕ್ಷಗಳು ಪ್ರತಿಭಟನೆ ನಡೆಸಿದ್ದವು.

ಭೇಟಿ ತೀವ್ರ ವಿವಾದ ಹುಟ್ಟು ಹಾಕುತ್ತಿರುವಂತೆ ಮಧ್ಯಪ್ರವೇಶಿಸಿರುವ 'ಗೋವಾ ಯುನಿವರ್ಸಿಟಿ' ಕುಲಪತಿ ಹಾಗೂ ಗೋವಾ ರಾಜ್ಯಪಾಲ ಎಸ್.ಎಸ್. ಸಿಧು, ಉಪ ಕುಲಪತಿ ದಿಲೀಪ್ ದಿಯೋಬಾಗ್ಕರ್ ಅವರಿಂದ ವಿವರಣೆ ಕೇಳಿ ನೊಟೀಸ್ ನೀಡಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿಯವರು ಯುನಿವರ್ಸಿಟಿ ಆವರಣದೊಳಗೆ ಮೂರು ರಾಜಕೀಯ ಸಭೆ ನಡೆಸಲು ಉಪ ಕುಲಪತಿ ಕಾರಣ ಎಂದು ಯುನಿವರ್ಸಿಟಿ ರಿಜಿಸ್ಟ್ರಾರ್ ಮೋಹನ್ ಸಾಂಗೋದ್ಕರ್ ಆರೋಪಿಸಿದ ಬೆನ್ನಿಗೆ ರಾಜ್ಯಪಾಲರು ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿದ್ದಾರೆ.

ರಾಹುಲ್ ವಿವಾದದ ಕುರಿತು ಪ್ರಕಟವಾಗಿರುವ ಮಾಧ್ಯಮ ವರದಿಗಳನ್ನೂ ರಾಜ್ಯಪಾಲರು ಗಮನಕ್ಕೆ ತೆಗೆದುಕೊಂಡಿದ್ದಾರೆ. ಈ ಸಂಬಂಧ ಉಪ ಕುಲಪತಿಯವರೊಂದಿಗೆ ಸಮಾಲೋಚನೆ ನಡೆಸಿರುವ ರಾಜ್ಯಪಾಲರು, ವಾಸ್ತವ ವರದಿ ಸಲ್ಲಿಸುವಂತೆ ಸೂಚನೆ ನೀಡಿದ್ದಾರೆ ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಎನ್. ರಾಧಾಕೃಷ್ಣನ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಾಹುಲ್ ಮೂರು ಬಾರಿ ಕಾಲೇಜು ಕ್ಯಾಂಪಸಿನಲ್ಲಿ ರಾಜಕೀಯ ಸಭೆಗಳನ್ನು ನಡೆಸಿದ ನಂತರ ರಾಜ್ಯ ಬಿಜೆಪಿ ಘಟಕವು ಭಾರೀ ಪ್ರತಿಭಟನೆ ನಡೆಸಿದ್ದಲ್ಲದೆ, ರಿಜಿಸ್ಟ್ರಾರ್ ರಾಜೀನಾಮೆ ನೀಡುವಂತೆ ಒತ್ತಾಯಿಸಿತ್ತು.

ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕ ಎನ್‌ಎಸ್‌ಯುಐ ಸಭೆ, ಯುವ ಕಾಂಗ್ರೆಸ್ ಸದಸ್ಯರ ಸಭೆ ಹಾಗೂ ರಾಜ್ಯ ಕಾಂಗ್ರೆಸ್ ಘಟಕದ ಸಭೆಗಳನ್ನು ಯುನಿವರ್ಸಿಟಿಯಲ್ಲಿ ರಾಹುಲ್ ನಡೆಸಿದ್ದರು.

ಕೆಲ ದಿನಗಳ ಹಿಂದಷ್ಟೇ ಮಧ್ಯಪ್ರದೇಶದ ಕೆಲವು ಕಾಲೇಜುಗಳಿಗೆ ಭೇಟಿ ನೀಡಿದ್ದ ರಾಹುಲ್, ರಾಜಕೀಯ ಭಾಷಣ ಮಾಡಿದ್ದಾರೆಂದು ಆರೋಪಿಸಲಾಗಿತ್ತು. ಇದಕ್ಕೆ ಅವಕಾಶ ನೀಡಿದ ಯುನಿವರ್ಸಿಟಿಗಳಿಗೆ ಅಲ್ಲಿನ ಬಿಜೆಪಿ ಸರಕಾರ ನೊಟೀಸ್ ಜಾರಿ ಮಾಡಿ ವಿವರಣೆಯನ್ನೂ ಕೋರಿತ್ತು.
ಸಂಬಂಧಿತ ಮಾಹಿತಿ ಹುಡುಕಿ