ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಪಾಕಿಸ್ತಾನಕ್ಕೆ ಭಾರತ ತಕ್ಕ ಪಾಠ ಕಲಿಸಬೇಕು: ಆರೆಸ್ಸೆಸ್
(Threat to borders | India's weakness | internal security | Mohanrao Bhagwat)
ಭಯೋತ್ಪಾದಕ ದಾಳಿಗಳು, ಗಡಿ ಮತ್ತು ಆಂತರಿಕ ಭದ್ರತೆಗೆ ಸದಾ ಬೆದರಿಕೆಯನ್ನು ಎದುರಿಸುತ್ತಿರುವುದು ಭಾರತದ ದುರ್ಬಲತೆಯನ್ನು ತೋರಿಸುತ್ತದೆ ಎಂದಿರುವ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ರಾವ್ ಭಾಗ್ವತ್, ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕೆಂದು ಗುಡುಗಿದ್ದಾರೆ.
ಭಾರತವು ಸ್ನೇಹಹಸ್ತದ ಅಭಿಲಾಷೆಯನ್ನು ತೋರಿಸುತ್ತಿದ್ದರೂ ಕಳೆದ 60 ವರ್ಷಗಳಿಂದ ಪಾಕಿಸ್ತಾನದಂತಹ ಪುಟ್ಟ ರಾಷ್ಟ್ರ ವೈರತ್ವವನ್ನೇ ಮೈಗೂಡಿಸಿಕೊಂಡಿದೆ. 2008ರ ಮುಂಬೈ ಭಯಾನಕ ದಾಳಿಯ ನಂತರವೂ ನಾವು ಆ ದೇಶದೊಂದಿಗೆ ಸ್ನೇಹದ ಮಾತುಕತೆ ನಡೆಸುತ್ತಿದ್ದೇವೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರ‌್ಯಾಲಿಯಲ್ಲಿ ಭಾಗ್ವತ್ ಖೇದ ವ್ಯಕ್ತಪಡಿಸಿದರು.
PTI
ಭಾರತದ ಮೇಲಿನ 26/11 ರೀತಿಯ ದಾಳಿಗಳು ಪುನರಾವರ್ತನೆಯಾಗದು ಎಂದು ನಾನು ಭರವಸೆ ನೀಡಲಾರೆ ಎಂದು ಪಾಕಿಸ್ತಾನ ಪ್ರಧಾನ ಮಂತ್ರಿ ಹೇಳಿದ್ದಾರೆ. ಇಂತಹ ಉದ್ಧಟತನ ತೋರುವ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಬೇಕು ಎಂದರು.
ಕಾಶ್ಮೀರದ ಮೇಲೆ ಪಾಕಿಸ್ತಾನದ ಕಣ್ಣಿದ್ದುದನ್ನು ಉದಾಹರಿಸಿರುವ ಅವರು, ಅಲ್ಲಿಂದ ಹೊರಗೆ ಹಾಕಲ್ಪಟ್ಟ ಮೂರು ಲಕ್ಷ ಕಾಶ್ಮೀರಿಗಳಿಗೆ ಅಲ್ಲೇ ಮರು ವಸತಿ ಕಲ್ಪಿಸಬೇಕು ಎಂದು ಭಾಗ್ವತ್ ಇದೇ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ.
ಲಡಾಖ್‌ನಲ್ಲಿನ ಚೀನಾ ಅತಿಕ್ರಮಣದ ಬಗ್ಗೆ ಮಾತನಾಡುತ್ತಾ, ನಮ್ಮ ಉತ್ತರ ಭಾಗದ ಗಡಿಯಲ್ಲಿ ಏನು ನಡೆಯುತ್ತಿದೆ ಎಂಬುದು ಅರಿವಾಗುತ್ತಿಲ್ಲ. ಈ ಬಗ್ಗೆ ಸರಕಾರ ಸ್ಪಷ್ಟಪಡಿಸಬೇಕು ಎಂದು ಭಾಗ್ವತ್ ತಿಳಿಸಿದರು.
ದೇಶದ ಸುರಕ್ಷತೆಯನ್ನು ರಾಜಕೀಯದೊಂದಿಗೆ ಮಿಲಿತಗೊಳಿಸಬಾರದು ಎಂದಿರುವ ಅವರು, ಬಾಂಗ್ಲಾದೇಶದಿಂದ ನಿರಂತರ ನುಸುಳುವಿಕೆ ಭಾರತದ ಆಂತರಿಕ ಭದ್ರತೆಗೆ ಬೆದರಿಕೆಯಾಗುತ್ತಿದ್ದರೂ ಓಟ್ ಬ್ಯಾಂಕ್ ರಾಜಕಾರಣದಿಂದಾಗಿ ಸಮಸ್ಯೆಯನ್ನು ಪರಿಹರಿಸಿಲ್ಲ ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡರು.