ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ ಮಹಿಳೆ ಮುಂದುವರಿದ ಜನಾಂಗದ ವ್ಯಕ್ತಿಯನ್ನು ಮದುವೆಯಾದ ಮೇಲೂ ಆಕೆ ತನ್ನ ಜಾತಿಯ ಸ್ಥಾನಮಾನಗಳನ್ನು ಉಳಿಸಿಕೊಳ್ಳುತ್ತಾಳೆ ಎಂದು ಬಾಂಬೆ ಹೈಕೋರ್ಟ್ ಶುಕ್ರವಾರ ಹೇಳಿದೆ.
WD
ನ್ಯಾಯಮೂರ್ತಿ ಬಿ.ಎಚ್. ಮಾರ್ಲಾಪಾಲೆ, ಅಭಯ್ ಓಕಾ ಮತ್ತು ಆರ್.ವೈ. ಗಾನೂ ಅವರನ್ನೊಳಗೊಂಡ ಪೀಠವು ಪ್ರಕರಣವನ್ನು ಆಲಿಸಿದ್ದು, ಮದುವೆಯಿಂದಾಗಿ ಮತ್ತು ಗಂಡನಿಂದಾಗಿ ಮಹಿಳೆಯ ಜಾತಿ ಬದಲಾಗದು ಎಂದು ಹೇಳಿದೆ.
ಸಂವಿಧಾನದ ಪ್ರಕಾರ ಜಾತಿ ಎನ್ನುವುದು ಹುಟ್ಟಿನಿಂದಲೇ ಬರುವಂತಹುದು. ಇದು ಮದುವೆಯಿಂದ ಅಥವಾ ದತ್ತಕದಿಂದ ಬದಲಾಗುವುದಿಲ್ಲ ಎಂದು ವಿವರಣೆ ನೀಡಿದೆ.
ಅದೇ ಹೊತ್ತಿಗೆ ಸ್ಪಷ್ಪಪಡಿಸಿರುವ ನ್ಯಾಯಾಲಯವು, ಮುಂದುವರಿದ ಅಥವಾ ಸಾಮಾನ್ಯ ಸಮುದಾಯದ ಯುವತಿಯೊಬ್ಬಳು ಹಿಂದುಳಿದ ಸಮುದಾಯದ ವ್ಯಕ್ತಿಯೊಬ್ಬನನ್ನು ಮದುವೆಯಾದರೆ, ಆತನ ಜನಾಂಗ ಅಥವಾ ಜಾತಿ ಬದಲಾಗದು ಎಂದಿದೆ.
ಪರಿಶಿಷ್ಟ ಪಂಗ ಮತ್ತು ಪರಿಶಿಷ್ಟ ಜಾತಿಗಳ ಕಾಯ್ದೆಯಡಿಯಲ್ಲಿ ತನ್ನ ವಿರುದ್ಧ ಕಳೆದ ವರ್ಷ ದಾಖಲಾದ ಪ್ರಕರಣದಿಂದಾಗಿ ಬಂಧನ ಭೀತಿ ಎದುರಿಸುತ್ತಿರುವ ವ್ಯಕ್ತಿ ಮತ್ತು ಕುಟುಂಬದವರು ರಕ್ಷಣೆ ನೀಡಬೇಕೆಂದು ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಆತನ ವಿರುದ್ಧ ಹಿಂದುಳಿದ ಸಮುದಾಯದ ಪತ್ನಿಯನ್ನು ನಿಂದಿಸಿದ ಆರೋಪ ಹೊರಿಸಲಾಗಿದೆ.