ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ರಾಜಸ್ತಾನದಲ್ಲಿ ಬಾಲ್ಯವಿವಾಹ ನೋಂದಣಿ; ಭಾರೀ ವಿರೋಧ (Rajasthan | child marriages | marriage register | social evil)
Bookmark and Share Feedback Print
 
ಬಾಲ್ಯವಿವಾಹ ಸೇರಿದಂತೆ ಎಲ್ಲಾ ಮದುವೆಗಳನ್ನೂ ನೋಂದಣಿ ಮಾಡುವ ನಿರ್ಧಾರಕ್ಕೆ ರಾಜಸ್ತಾನ ಸರಕಾರ ಬಂದಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿದೆ. ಇದು ಬಾಲ್ಯವಿವಾಹಗಳನ್ನು ಪ್ರೋತ್ಸಾಹಿಸಲಿದೆ ಎಂದು ಹೇಳಿರುವ ಸಾಮಾಜಿಕ ಸಂಘಟನೆಗಳು ಈ ಕಾನೂನಿಗೆ ವಿರೋಧ ವ್ಯಕ್ತಪಡಿಸಿವೆ.

ಆದರೆ ಸರಕಾರದ ಪ್ರಕಾರ ಇದರಿಂದಾಗಿ ಈ ಸಾಮಾಜಿಕ ಪಿಡುಗಿನ ವಿರುದ್ಧ ಕಾನೂನಿನ ಮಾನ್ಯತೆ ನೀಡಿದಂತಾಗುವುದಿಲ್ಲ. ಎಲ್ಲಾ ಮದುವೆಗಳನ್ನೂ ನೋಂದಣಿ ಮಾಡಿಕೊಳ್ಳುವ ಮಸೂದೆಯನ್ನು ಕಳೆದ ವರ್ಷ ಅಂಗೀಕರಿಸಲಾಗಿತ್ತು. ಇದೀಗ ಆ ಕಾನೂನನ್ನು ಜಾರಿಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸಿದೆ.

ಅಧಿಕೃತ ಮಾಹಿತಿಗಳ ಪ್ರಕಾರ ರಾಜ್ಯದಲ್ಲಿ ಶೇ.68ರಷ್ಟು ಹುಡುಗಿಯರಿಗೆ 18 ವರ್ಷದೊಳಗೆ ಮದುವೆಯಾಗಿರುತ್ತದೆ. ಅದರಲ್ಲೂ ಹೆಚ್ಚಾಗಿ ಬಾಲ್ಯವಿವಾಹಗಳು ನಡೆಯುವುದು 'ಅಖಾ ತೀಜ್' ಎಂಬ ಬುಡಕಟ್ಟು ಜನಾಂಗದಲ್ಲಿ. ಬಾಲ್ಯವಿವಾಹಗಳು ಶುಭವನ್ನುಂಟು ಮಾಡುತ್ತವೆ ಎಂದು ಈ ಸಮುದಾಯದವರು ಭಾವಿಸುತ್ತಾರೆ. ಮಕ್ಕಳಿಗೆ ಮದುವೆ ಮಾಡದಂತೆ ಎಲ್ಲಾ ಜಿಲ್ಲೆಗಳಲ್ಲೂ ವಿಶೇಷ ತಂಡಗಳನ್ನು ಸರಕಾರ ನೇಮಿಸಿರುವ ಹೊರತಾಗಿಯೂ ಇದು ಮುಂದುವರಿದಿದೆ.

ವಧುವಿನ ಕನಿಷ್ಠ ವಯಸ್ಸು 18 ಮತ್ತು ವರನ ವಯಸ್ಸು 21 ಎನ್ನುವ ಮದುವೆ ನೋಂದಣಿ ಕಾನೂನಿಗೆ ಸರಕಾರ ತೆಗೆದುಕೊಂಡಿರುವ ನಿರ್ಧಾರ ಸಂಪೂರ್ಣ ವಿರುದ್ಧವಾದುದು. ಬಾಲ್ಯವಿವಾಹಗಳನ್ನು ಕಾನೂನು ಬಾಹಿರ ಎಂದು ಪರಿಗಣಿಸಿರುವಾಗ ಅಂತಹ ಮದುವೆಗಳನ್ನು ಹೇಗೆ ನೋಂದಣಿ ಮಾಡಿಕೊಳ್ಳಲಾಗುತ್ತದೆ ಎಂದು ಪಿಯುಸಿಎಲ್ ಸಂಘಟನೆಯ ಕವಿತಾ ಎಂಬವರು ಪ್ರಶ್ನಿಸಿದ್ದಾರೆ.

ಸರಕಾರವು ಮದುವೆಯ ಕನಿಷ್ಠ ವಯಸ್ಸನ್ನು ಇಳಿಕೆಗೊಳಿಸಲು ಯೋಜಿಸುತ್ತಿದೆಯೇ ಎಂಬುದನ್ನು ಸ್ಪಷ್ಟಪಡಿಸಬೇಕು. ಮದುವೆ ವಯಸ್ಸನ್ನು ಕಡಿಮೆ ಮಾಡಿದರೆ ಮಾತ್ರ ಈ ವಿವಾಹಗಳನ್ನು ನೋಂದಣಿ ಮಾಡಿಕೊಳ್ಳಲು ಸಾಧ್ಯ. ಹಾಗಾದಲ್ಲಿ ಬಾಲ್ಯವಿವಾಹ ಎಂಬ ಪ್ರಶ್ನೆಯೇ ಅಲ್ಲಿ ಉದ್ಭವಿಸುವುದಿಲ್ಲ ಎಂದು ಆಕೆ ಸರಕಾರವನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ