ಬಿಜೆಪಿ ಅಧ್ಯಕ್ಷನಾಗಿ ನಾನು ಕೈಗೊಂಬೆಯಾಗಲ್ಲ: ನಿತಿನ್ ಗಡ್ಕರಿ
ನವದೆಹಲಿ, ಭಾನುವಾರ, 24 ಜನವರಿ 2010( 17:30 IST )
ಪಕ್ಷದ ಹಿರಿಯ ನಾಯಕರಿಂದ ಶೇ.100ರಷ್ಟು ಸಹಕಾರ ಮತ್ತು ಬೆಂಬಲ ಸಿಗುತ್ತಿದೆ ಎಂದು ತಿಂಗಳ ಹಿಂದಷ್ಟೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ನಿತಿನ್ ಗಡ್ಕರಿ ಹೇಳಿದ್ದು, ಅರುಣ್ ಜೇಟ್ಲಿ ಮತ್ತು ಸುಷ್ಮಾ ಸ್ವರಾಜ್‌ರಂತಹ ನಾಯಕರಿಂದ ನನ್ನನ್ನು ಕೀಲುಗೊಂಬೆಯಾಗಿಸುವ ಯತ್ನ ನಡೆದಿಲ್ಲ ಎಂದಿದ್ದಾರೆ.
ಡಿಸೆಂಬರ್ 20ರಂದು ಬಿಜೆಪಿ ರಾಷ್ಟ್ರಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದ ಗಡ್ಕರಿ ವಾರ್ತಾವಾಹಿನಿಯೊಂದರ 'ಡೆವಿಲ್ಸ್ ಅಡ್ವೊಕೇಟ್' ಕಾರ್ಯಕ್ರಮದಲ್ಲಿ ಮಾತನಾಡುತ್ತಾ, ಜೇಟ್ಲಿ ಮತ್ತು ಸ್ವರಾಜ್ ತನ್ನನ್ನು ಅವರ ತಾಳಕ್ಕೆ ಕುಣಿಯುವಂತೆ ಮಾಡಿದ್ದಾರೆ ಎಂಬ ವಾದಗಳನ್ನು ತಳ್ಳಿ ಹಾಕಿದರು.
ಇಲ್ಲ. ಅವರಲ್ಲಿ ಆ ರೀತಿಯ ಯಾವುದೇ ಉದ್ದೇಶಗಳಿಲ್ಲ. ನಾನು ಯಾರ ಕೈಗೊಂಬೆಯೂ ಆಗಲ್ಲ ಎನ್ನುವುದು ನನ್ನ ಬಗ್ಗೆ ತಿಳಿದುಕೊಂಡಿರುವ ಜನಗಳ ಅರಿವಿನಲ್ಲಿದೆ ಎಂದರು.
ಸುಷ್ಮಾ, ಜೇಟ್ಲಿ, ವೆಂಕಯ್ಯ ನಾಯ್ಡು ಮತ್ತು ಅನಂತ್ ಕುಮಾರ್ ಅವರಂತಹ ನಾಯಕರುಗಳಿಂದ ಸಂಪೂರ್ಣ ಸಹಕಾರ ಸಿಗುತ್ತಿದೆಯೇ ಎಂದು ಪ್ರಶ್ನಿಸಿದಾಗ, ಶೇ.100ರಷ್ಟು ಸಹಕಾರವಿದೆ; ಎಲ್ಲಾ ನಾಯಕರೂ ನನಗೆ ಬೆಂಬಲವಾಗಿದ್ದಾರೆ. ಅವರೆಲ್ಲ ಹೃನ್ಮನ ತುಂಬಿ ನನ್ನನ್ನು ಒಟ್ಟಾಗಿ ಬೆಂಬಲಿಸುತ್ತಿದ್ದಾರೆ. ಅವರು ನನಗೆ ಸರಿಯಾದ ಹಾದಿಯಲ್ಲಿ ಸಾಗಲು ಮಾರ್ಗದರ್ಶನ ನೀಡುತ್ತಿದ್ದಾರೆ ಎಂದರು.
ಅದೇ ಹೊತ್ತಿಗೆ ರಾಜಸ್ತಾನ, ಬಿಹಾರ್, ಕರ್ನಾಟಕ, ಉತ್ತರಾಂಚಲ ಮತ್ತು ಗುಜರಾತ್ ರಾಜ್ಯಗಳ ಪಕ್ಷದ ಘಟಕಗಳಲ್ಲಿ ಭಿನ್ನಾಭಿಪ್ರಾಯಗಳಿರುವುದನ್ನು ಗಡ್ಕರಿ ಒಪ್ಪಿಕೊಂಡಿದ್ದಾರೆ.
ನಾವು ಇತರ ಪಕ್ಷಗಳಿಗಿಂತ ಭಿನ್ನರಾಗಿರುವುದರಿಂದ ಜನ ನಮ್ಮಿಂದ ಭಿನ್ನತೆಯನ್ನು ಬಯಸುತ್ತಾರೆ. ನಮ್ಮದು ಪ್ರಜಾಪ್ರಭುತ್ವ ಹೊಂದಿರುವ ಪಕ್ಷ. ಹಾಗಾಗಿ ಅಭಿಪ್ರಾಯ ಭೇದ ಸಾಮಾನ್ಯ. ಅವ್ಯಾವುವೂ ಗಂಭೀರವಲ್ಲ ಎಂದರು.
ಆರೆಸ್ಸೆಸ್ ಬೆಂಬಲದಿಂದ ಅಧಿಕಾರಕ್ಕೆ ಬಂದ ಗಡ್ಕರಿ, ಅದರ ಸೂಚನೆಗಳನ್ನಷ್ಟೇ ಪಾಲಿಸುತ್ತಾರೆ ಎಂಬ ವಾದವನ್ನೂ ಅವರು ಒಪ್ಪಲಿಲ್ಲ. ತಾನು ಸ್ವತಂತ್ರ ನಿರ್ಧಾರಗಳನ್ನು ಕೈಗೊಳ್ಳುವುದಕ್ಕೆ ಯಾವುದೇ ಅಡ್ಡಿಯಿಲ್ಲ, ಆರೆಸ್ಸೆಸ್ ಪಕ್ಷದ ವಿಚಾರಗಳಲ್ಲಿ ಮಧ್ಯ ಪ್ರವೇಶ ಮಾಡುವುದಿಲ್ಲ ಎಂದರು.