ರಾಷ್ಟ್ರೀಯ | ಅಂತಾರಾಷ್ಟ್ರೀಯ | ರಾಜ್ಯ ಸುದ್ದಿ | ಪ್ರಚಲಿತ | ಸರ್ವಜ್ಞ
ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ನವಜಾತ ಶಿಶುವಿನ ಕೈಗಳನ್ನೇ ಕತ್ತರಿಸಿದ ಯಮರೂಪಿ ವೈದ್ಯರು! (newborn baby | government hospital | chopped arm | Udaipur)
Bookmark and Share Feedback Print
 
ಮಗುವಿಗೆ ಜನ್ಮ ನೀಡಬೇಕೆಂಬ ಕನಸನ್ನು ಎಂಟು ತಿಂಗಳುಗಳ ಗರ್ಭದೊಂದಿಗೆ ಹೊತ್ತು ತಂದಿದ್ದ ಮಹಿಳೆಗೆ ಸರಕಾರಿ ಆಸ್ಪತ್ರೆಯೊಂದು ನೀಡಿದ ಉಪಚಾರವಿದು.

ಸಿಸೇರಿಯನ್ ಹೆರಿಗೆ ಮಾಡುವಾಗ ಗರ್ಭದೊಳಗಿದ್ದ ಮಗುವಿನ ಬಾಹುಗಳನ್ನೇ ಛೇದಿಸಿದ್ದ ಯಮರೂಪಿ ವೈದ್ಯರು ಬಳಿಕ ಎಚ್ಚೆತ್ತುಕೊಂಡಿದ್ದರಾದರೂ ಕಾಲ ಮೀರಿ ಹೋಗಿತ್ತು. ತೀವ್ರ ರಕ್ತಸ್ರಾವದಿಂದ ಮಗು ಮೂರನೇ ದಿನದಲ್ಲಿ ಇಹಲೋಕದ ಯಾತ್ರೆಯನ್ನು ಮುಗಿಸಿತ್ತು.

ಉದಯಪುರದ ಸರಕಾರಿ ಆಸ್ಪತ್ರೆಗೆ ಹೆರಿಗೆಗೆಂದು ಬಂದಿದ್ದ 25ರ ಹರೆಯದ ಬಬ್ಲಿ ಎಂಬ ಯುವತಿಗೆ ಸಿಸೇರಿಯನ್ ಆಪರೇಷನ್ ಮಾಡಿ ಹೆರಿಗೆ ಮಾಡಿಸಲಾಗಿತ್ತು. ಹೆಣ್ಣು ಮಗುವಿಗೆ ಜನ್ಮ ನೀಡಿದ್ದ ಆಕೆಯ ನವಜಾತ ಶಿಶುವಿನ ರಟ್ಟೆಗಳು ನಿರ್ಲಕ್ಷ್ಯಭರಿತ ಡಾಕ್ಟರುಗಳ ಹರಿತವಾದ ಕತ್ತರಿಗಳಿಗೆ ಬಲಿಯಾಗಿದ್ದವು.

ಇದು ಗಮನಕ್ಕೆ ಬರುತ್ತಿದ್ದಂತೆ ಹೆತ್ತವಳಿಗೆ ಮತ್ತು ಆಕೆಯ ಕುಟುಂಬದವರಿಗೆ ಮಗುವನ್ನು ತೋರಿಸದೆ ವಂಚಿಸಲಾಗಿತ್ತು. ಮಗು ನರ್ಸರಿ ವಿಭಾಗದಲ್ಲಿದೆ, ಚಿಕಿತ್ಸೆ ನೀಡಲಾಗುತ್ತಿದೆ ಎಂದಷ್ಟೇ ತಾಯಿಗೆ ವೈದ್ಯರು ದಿನಾ ಸಬೂಬು ನೀಡುತ್ತಿದ್ದರು.

ಎರಡು ದಿನಗಳ ಬಳಿಕ ಮೊತ್ತ ಮೊದಲ ಬಾರಿಗೆ ಮಗುವನ್ನು ಹೆತ್ತವರಿಗೆ ತೋರಿಸಲಾಗಿತ್ತು. ತೀವ್ರ ಗಾಯಗೊಂಡಿದ್ದ ಮಗುವಿನ ಪುಟ್ಟ ರಟ್ಟೆಗಳಿಂದ ಆಗಲೂ ರಕ್ತ ಸುರಿಯುತ್ತಿತ್ತು.

ರಟ್ಟೆ ಬ್ಲೇಡುಗಳಿಗೆ ಆಹುತಿಯಾದ ನಂತರವೂ ವೈದ್ಯರು ನಿರ್ಲಕ್ಷ್ಯ ವಹಿಸಿದ್ದು, ಸರಿಯಾಗಿ ಡ್ರೆಸ್ಸಿಂಗ್ ಕೂಡ ಮಾಡಿರಲಿಲ್ಲ. ಈ ಕುರಿತು ವೈದ್ಯರ ಗಮನ ಸೆಳೆದಾಗ, ಎಲ್ಲವೂ ಸರಿಯಾಗಿದೆ. ಕೆಲವು ದಿನಗಳಲ್ಲಿ ಸರಿ ಹೋಗುತ್ತದೆ ಎಂದಿದ್ದರು.

ಆದರೆ ಮೂರನೇ ದಿನ ಮಗು ಸತ್ತು ಹೋಗಿತ್ತು. ಇದರಿಂದ ಆಕ್ರೋಶಿತರಾದ ಹೆತ್ತವರು ಮತ್ತು ಸ್ಥಳೀಯರು ಆಸ್ಪತ್ರೆ ಮತ್ತು ವೈದ್ಯರ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿದ್ದಾರೆ.

ವೈದ್ಯರು ಮಾತ್ರ ತಮ್ಮದೇನೂ ತಪ್ಪಿಲ್ಲ, ಸಿಸೇರಿಯನ್ ಸಂದರ್ಭದಲ್ಲಿ ಇವೆಲ್ಲ ಸಾಮಾನ್ಯ. ನಾವು ಸರಿಯಾಗಿಯೇ ಚಿಕಿತ್ಸೆ ನೀಡಿದ್ದೆವು ಎಂದು ಸಮರ್ಥಿಸಿಕೊಂಡಿದ್ದಾರೆ. ಬೆನ್ನಿಗೆ ಜಿಲ್ಲಾಧಿಕಾರಿ ನೇಮಿಸಿದ್ದ ಸಮಿತಿಯು ಕೂಡ ವೈದ್ಯರ ತಪ್ಪಿಲ್ಲ ಎಂದು ಪ್ರಮಾಣಪತ್ರವನ್ನೂ ನೀಡಿದೆ.

ಆದರೆ ಇದಕ್ಕೆ ಪ್ರತಿಕ್ರಿಯಿಸಿರುವ ಇಲ್ಲಿನ ಜಿಲ್ಲಾಧಿಕಾರಿ, ಸಮಿತಿಯ ವರದಿ ಬಂದ ಕೂಡಲೇ ವೈದ್ಯರು ನಿರಪರಾಧಿಗಳು ಎಂದು ಹೇಳಲಾಗದು. ಮತ್ತಷ್ಟು ಮಾಹಿತಿಗಳನ್ನು ಕಲೆ ಹಾಕಿದ ನಂತರ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

ಯಾರು ಯಾವ ಕ್ರಮ ಕೈಗೊಂಡರೂ ತಾಯಿಗೆ ತನ್ನ ಮಗುವಿಗೆ ಸರಿಸಮಾನವಾದ ಪರಿಹಾರ ನೀಡಲು ಸಾಧ್ಯವೇ?
ಸಂಬಂಧಿತ ಮಾಹಿತಿ ಹುಡುಕಿ