ಬಿಜೆಪಿಯಿಂದಲೇ ಸ್ಪರ್ಧಿಸಿ ಎಂದಿದ್ದರು ಅಡ್ವಾಣಿ: ಉಮಾ ಭಾರತಿ
ನವದೆಹಲಿ, ಸೋಮವಾರ, 25 ಜನವರಿ 2010( 11:50 IST )
ಕಳೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಿಂದ ಬಿಜೆಪಿ ಟಿಕೆಟಿನಲ್ಲೇ ಸ್ಪರ್ಧಿಸುವಂತೆ ಎಲ್.ಕೆ. ಅಡ್ವಾಣಿಯವರು ಆಹ್ವಾನ ನೀಡಿದ್ದರು, ಆದರೆ ನಾನು ತಿರಸ್ಕರಿಸಿದ್ದೆ ಎಂದು ಬೆಂಕಿಯ ಚೆಂಡು ಖ್ಯಾತಿಯ ಬಿಜೆಪಿ ಮಾಜಿ ನಾಯಕಿ ಉಮಾ ಭಾರತಿ ಹೇಳಿಕೊಂಡಿದ್ದಾರೆ.
ಬಿಜೆಪಿಗೆ ಮರಳುವಂತೆ ಸುಪ್ರೀಂ ಅಡ್ವಾಣಿಯವರು ನನಗೆ ಕರೆ ನೀಡಿದ್ದರು. ಅಲ್ಲದೆ ಅಮ್ರೋಹಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವಂತೆ ಅವರು ತಿಳಿಸಿದ್ದರು ಎಂದು ಉಮಾ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡುತ್ತಾ ವಿವರಿಸಿದ್ದಾರೆ.
ಯಾರದೇ ಕರುಣೆಯಿಂದಾಗಿ ಚುನಾವಣೆಗಳಲ್ಲಿ ಸ್ಪರ್ಧಿಸುವುದನ್ನು ನಾನು ಬಯಸಿರದ ಕಾರಣ ಅಡ್ವಾಣಿಯವರ ಆಹ್ವಾನವನ್ನು ನಯವಾಗಿ ತಿರಸ್ಕರಿಸಿದ್ದೆ. ಅಡ್ವಾಣಿ ನನ್ನ ನಾಯಕೆಂಬುದನ್ನು ಒಪ್ಪಿಕೊಂಡು, ನಾನು ಎನ್‌ಡಿಎ ಭಾಗವಾಗಿರಲು ಇಚ್ಛಿಸುತ್ತೇನೆ ಎಂದು ಅವರಿಗೆ ತಿಳಿಸಿದ್ದೆ ಎಂದು ಅವರು ನುಡಿದರು.
PTI
ಭಾರತೀಯ ಜನಶಕ್ತಿ ಪಕ್ಷದ ಸಂಸ್ಥಾಪಕಿ ಹಾಗೂ ಮುಖ್ಯಸ್ಥೆಯಾಗಿರುವ ಉಮಾ ಭಾರತಿ, ತಾನು ಬಿಜೆಪಿಯಿಂದ ಪ್ರತ್ಯೇಕಗೊಂಡಿಲ್ಲ ಎಂದು ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ನಾವು ಬಿಜೆಪಿಗಿಂತ ಭಿನ್ನ ದೃಷ್ಟಿಕೋನವನ್ನು ಹೊಂದಿದ್ದರೆ ಲೋಕಸಭಾ ಚುನಾವಣೆಯಲ್ಲಿ ನಾಶವಾಗಿ ಹೋಗುತ್ತಿದ್ದೆವು. ಹಾಗಾಗಿ ಬಿಜೆಪಿ ಮತ್ತು ನಮ್ಮ ಪಕ್ಷದ ಸಿದ್ಧಾಂತಗಳಲ್ಲಿ ಭಿನ್ನತೆಯಿಲ್ಲ. ಬೇರೆ ಯಾವುದೇ ಮೈತ್ರಿಕೂಟದೊಂದಿಗೆ ಗುರುತಿಸಿಕೊಳ್ಳದೆ ಎನ್‌ಡಿಎ ಜತೆಗೇ ಇರುವುದು ನನ್ನ ರಾಜಕೀಯ ಬದ್ಧತೆ ಎಂದರು.
ತಾನು ಎನ್‌ಡಿಎ ಭಾಗವಾಗಲು ಬಯಸುತ್ತಿದ್ದೇನೆ ಎಂದು ಅಡ್ವಾಣಿ ಮತ್ತು ಜೆಡಿಯು ಮುಖಂಡ ಶರದ್ ಯಾದವ್ ಅವರಲ್ಲಿ ಪ್ರಸ್ತಾಪ ಮಾಡಿದ್ದೆ. ಆದರೆ ಯಾವುದೇ ಪ್ರತಿಕ್ರಿಯೆ ಅವರಿಂದ ಬಂದಿಲ್ಲ. ಬಿಜೆಪಿಯ ನೂತನ ಅಧ್ಯಕ್ಷ ನಿತಿನ್ ಗಡ್ಕರಿ ಕೂಡ ನನ್ನನ್ನು ಇದುವರೆಗೆ ಸಂಪರ್ಕಿಸಿಲ್ಲ ಎಂದು ಉಮಾ ಭಾರತಿ ತಿಳಿಸಿದ್ದಾರೆ.
ನಾನು ಪ್ರಸ್ತಾಪ ಮಾಡಿದ್ದಾಗ, ಗಡ್ಕರಿಯವರು ಅಧ್ಯಕ್ಷರಾದ ನಂತರ ಈ ಕುರಿತ ನಿರ್ಧಾರವನ್ನು ತೆಗೆದುಕೊಳ್ಳುವುದಾಗಿ ಅಡ್ವಾಣಿಯವರು ನನಗೆ ಹೇಳಿದ್ದರು ಎಂದು ಅವರು ಹೇಳಿದರು.