ಮುಖ್ಯ ಪುಟ » ಸುದ್ದಿ ಜಗತ್ತು » ಸುದ್ದಿಗಳು » ರಾಷ್ಟ್ರೀಯ » ಚಟ್ಟದಿಂದ ಎದ್ದು ಕೂತು ನೀರು ಕುಡಿದವನು ಸತ್ತಿದ್ದನಂತೆ..!
(Dead man | West Bengal | mentally-ill patient | private hospital)
ವೈದ್ಯರ ನಿರ್ಲಕ್ಷ್ಯವೆನ್ನಬೇಕೋ ಅಥವಾ ವೈಚಿತ್ರವೆನ್ನಬೇಕೋ ಎಂಬ ಗೊಂದಲಗಳಿಗೆ ಇತ್ತೀಚಿನ ಸತ್ತವರು ಎದ್ದು ಬರುತ್ತಿರುವ ಸಾಲು-ಸಾಲು ಪ್ರಕರಣಗಳು ಕಾರಣವಾಗುತ್ತಿವೆ. ಅದಕ್ಕೆ ಮತ್ತೊಂದು ಸೇರ್ಪಡೆ ಈ ಪ್ರಸಂಗ.
ಪಶ್ಚಿಮ ಬಂಗಾಲದ ಖಾಸಗಿ ಆಸ್ಪತ್ರೆಯೊಂದರಲ್ಲಿ ವ್ಯಕ್ತಿಯೊಬ್ಬ ಮರಣ ಹೊಂದಿದ್ದಾನೆ ಎಂದು ಪ್ರಮಾಣ ಪತ್ರ ನೀಡಿದ ಬಳಿಕ ಅಂತಿಮ ಸಂಸ್ಕಾರ ನಡೆಸುವ ಹೊತ್ತಿನಲ್ಲಿ ಚಟ್ಟದಿಂದ ಎದ್ದು ಕೂತು ನೀರು ಬೇಕೆಂದು ಕೇಳಿದ್ದಾನಂತೆ ಈತ.
ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಇಲ್ಲಿನ ಹೂಗ್ಳಿ ಜಿಲ್ಲೆಯ ಮಂಕುಂಡು ಎಂಬಲ್ಲಿನ ಅಪರ್ಬಾ ಚಕ್ರವರ್ತಿ (60) ಎಂಬ ಮಾನಸಿಕ ಅಸ್ವಸ್ಥನೊಬ್ಬ ಭಾನುವಾರ ಹೃದಯದ ತೊಂದರೆಯಿಂದ ಸಾವನ್ನಪ್ಪಿದ್ದ. ಈ ಕುರಿತು ವೈದ್ಯರು ಮರಣ ಪ್ರಮಾಣಪತ್ರವನ್ನೂ ನೀಡಿದ್ದರು.
ಚಕ್ರವರ್ತಿ ಶವವನ್ನು ಕೊಲ್ಕತ್ತಾದ ಶ್ಯಾಮ್‌ಪುಕುರ್ ಲೇನ್‌ನಲ್ಲಿನ ಅವರ ಸಹೋದರ ಸುಬಾಷ್ ಮನೆಗೆ ಕೊಂಡೊಯ್ದು ಅಂತಿಮ ಸಂಸ್ಕಾರ ನಡೆಸುವುದೆಂದು ತೀರ್ಮಾನಿಸಲಾಗಿತ್ತು. ಅದರಂತೆ ಸಿದ್ಧತೆ ನಡೆಯುತ್ತಿದ್ದಾಗ ಧಡಕ್ಕನೆದ್ದ ಚಕ್ರವರ್ತಿ ನೀರು ಬೇಕೆಂದು ಕೇಳಿದರು.
ಈ ಹೊತ್ತಿಗೆ ಶೋಕತಪ್ತರಾಗಿದ್ದ ಕುಟುಂಬದ ಸದಸ್ಯರು ಬೆಚ್ಚಿ ಬಿದ್ದು ದೂರ ಓಡತೊಡಗಿದರು. ಮಕ್ಕಳಂತೂ ತೀವ್ರ ಭೀತಿಗೊಳಗಾದರು ಎಂದು ಸುಭಾಷ್ ವಿವರಿಸಿದ್ದಾರೆ.
ಚಕ್ರವರ್ತಿ ಬದುಕಿದ್ದಾರೆ ಎಂಬುದು ಖಚಿತವಾಗುತ್ತಿದ್ದಂತೆ ಸುಭಾಷ್ ಅವರನ್ನು ಮತ್ತೊಂದು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಮೊದಲು ಸೇರಿಸಲಾಗಿದ್ದ ಆಸ್ಪತ್ರೆಯ ವಿರುದ್ಧ ಕಿಡಿ ಕಾರುತ್ತಿದ್ದಾರೆ. ಆದರೆ ಆ ಆಸ್ಪತ್ರೆ ಆಡಳಿತವು ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸುತ್ತಿದೆ ಎಂದು ಸುಭಾಷ್ ಹೇಳುತ್ತಾರೆ.